ಹಾಸನದಿಂದ ರೋಹಿಣಿ ಸಿಂಧೂರಿ ವರ್ಗಾವಣೆ: ಸರಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ

Update: 2018-06-20 16:21 GMT

ಬೆಂಗಳೂರು, ಜೂ.20: ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವ ವಿಚಾರ ಸಂಬಂಧ ಸರಕಾರದ ನಿಲುವು ಏನು ಎಂದು ಹೈಕೋರ್ಟ್ ಕೇಳಿದೆ.

ಸರಕಾರವು ತಮ್ಮನ್ನು ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ಅವಧಿಪೂರ್ವವಾಗಿ ವರ್ಗಾವಣೆ ಮಾಡಿದೆ. ಈ ಕ್ರಮ ಕಾನೂನು ಬಾಹಿರ ಎಂದು ಆರೋಪಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಜತೆಗೆ, ಅರ್ಜಿ ಇತ್ಯರ್ಥವಾಗುವರೆಗೆ ತಮ್ಮನ್ನು ಮತ್ತೆ ಹಾಸನ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾಯಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಬುಧವಾರ ಈ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಂ. ನವಾಜ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರೋಹಿಣಿ ಪರ ವಕೀಲರು, ರಾಜ್ಯದಲ್ಲಿ ರಚನೆಯಾಗಿರುವ ಹೊಸ ಸರಕಾರವು ರೋಹಿಣಿ ಅವರನ್ನು ಮತ್ತೆ ಹಾಸನಕ್ಕೆ ವರ್ಗಾವಣೆ ಮಾಡುವ ಸಾಧ್ಯತೆಯಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರು ಹೇಳುತ್ತಿರುವುದು ನಿಜವೇ? ಎಂದು ಸರಕಾರಿ ವಕೀಲರನ್ನು ಪ್ರಶ್ನಿಸಿತು. ಅಲ್ಲದೆ, ಒಂದೊಮ್ಮೆ ರೋಹಿಣಿ ಅವರನ್ನು ಮತ್ತೆ ಹಾಸನಕ್ಕೆ ಕರೆಯಿಸಿಕೊಂಡರೆ ಪ್ರಕರಣ ಇಲ್ಲಿಗೆ ಮುಕ್ತಾಯ ಕಾಣಲಿದೆ. ಹೀಗಾಗಿ, ಈ ಕುರಿತು ಸರಕಾರದ ನಿಲುವು ಏನು? ಈ ಬಗ್ಗೆ ಗುರುವಾರ ಮಾಹಿತಿ ನೀಡಲು ಸಾಧ್ಯವೇ? ಎಂದು ಸರಕಾರಿ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು.

ಸರಕಾರಿ ವಕೀಲರು ಉತ್ತರಿಸಿ, ಗುರುವಾರ ಮಾಹಿತಿ ನೀಡಲು ಕಷ್ಟಸಾಧ್ಯ. ಸರಕಾರದಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸಲು ಸೋಮವಾರದವರೆಗೆ (ಜೂ.25) ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಒಪ್ಪಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

ರೋಹಿಣಿ ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಿಂದ ಹುದ್ದೆಯಿಂದ, ಕೈಗಾರಿಕಾ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯಕ್ಕೆ ವ್ಯವಸ್ಥಾಪಕ ನಿರ್ದೇಶಕರು ಹುದ್ದೆಗೆ ಮಾ.3ರಂದು ಹಿಂದಿನ ಕಾಂಗ್ರೆಸ್ ಸರಕಾರ ವರ್ಗಾಯಿಸಲಾಗಿತ್ತು. ಇದರ ವಿರುದ್ಧ ರೋಹಿಣಿ ಕೆಎಟಿ ಮೊರೆ ಹೋಗಿದ್ದರು.ಕೆಎಟಿ ಸಹ ಎ.17ರಂದು ರೋಹಿಣಿ ಅರ್ಜಿ ವಜಾಗೊಳಿಸಿ, ವರ್ಗಾವಣೆ ಆದೇಶ ಎತ್ತಿಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News