ಅಂಕೋಲಾ ಗ್ರಾಮದ ರಸ್ತೆ ದುರಸ್ತಿಗೆ 48.25 ಲಕ್ಷ ಬಿಡುಗಡೆ: ಹೈಕೋರ್ಟ್‌ಗೆ ಹೇಳಿಕೆ ನೀಡಿದ ಸರಕಾರ
ಬೆಂಗಳೂರು, ಜೂ.20: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮದಲ್ಲಿ ಹದಗೆಟ್ಟಿರುವ ಸಾರ್ವಜನಿಕ ರಸ್ತೆ ದುರಸ್ತಿಗೆ 48.25 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರಕಾರ ತಿಳಿಸಿದೆ.
ಅಂಕೋಲಾ ತಾಲೂಕಿನ ಗುಲ್ಲಾಪುರ-ಕಿಮ್ಮಾಣಿ ನಡುವಿನ 24 ಕಿ.ಮೀ ಉದ್ದದ ರಸ್ತೆ ದುರಸ್ತಿ ಮಾಡಲು ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಡೋಂಗ್ರಿ ಗ್ರಾಮದ ಪ್ರೇಮ್‌ಕುಮಾರ್ ಹೆಗಡೆ ಹಾಗೂ ಇತರೆ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಡೋಂಗ್ರಿ ಗ್ರಾಮದಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಹಣ ಬಿಡುಗಡೆ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಯು ಜೂ.20ರಂದು ವಿಚಾರಣೆಗೆ ಖುದ್ದು ಹಾಜರಿರಬೇಕೆಂದು ಜೂ.19ರಂದು ನ್ಯಾಯಪೀಠವು ಆದೇಶಿಸಿತ್ತು. ಆದರೆ, ರಾಜ್ಯ ಸರಕಾರವು ಜೂ.19ರಂದೆ ರಸ್ತೆ ದುರಸ್ಥಿಗೆ ಹಣವನ್ನು ಬಿಡುಗಡೆ ಮಾಡಿದ್ದರಿಂದ ಅಧಿಕಾರಿಯನ್ನು ಕೋರ್ಟ್‌ಗೆ ಯಾಕೆ ಬರಹೇಳಿದಿರಿ ಎಂದು ಸರಕಾರಿ ವಕೀಲರನ್ನು ನ್ಯಾಯಪೀಠವು ಪ್ರಶ್ನಿಸಿತು.
ಅಲ್ಲದೆ, ನ್ಯಾಯಾಲಯದ ಆದೇಶವನ್ನು ಸರಕಾರಿ ವಕೀಲರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅಧಿಕಾರಿಗಳು ತಮ್ಮ ಸ್ವಂತ ಹಣದಿಂದ ಇಲ್ಲಿಗೆ ಬರುತ್ತಾರೆ. ಮೇಲಾಗಿ ಅವರು ವಿಚಾರಣೆಗೆಂದು ಬಂದು ನಿಂತರೆ ಅವರ ಒಂದು ದಿನದ ಕೆಲಸಗಳೆಲ್ಲ ಹಾಳಾಗುತ್ತವೆ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.