×
Ad

ಚಿಕ್ಕಮಗಳೂರು: ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

Update: 2018-06-20 22:26 IST

ಚಿಕ್ಕಮಗಳೂರು, ಜೂ,20: ಇಲ್ಲಿನ ಜಿಲ್ಲಾ ಪಂಚಾಯತ್‍ನಲ್ಲಿ ತೆರವಾಗಿದ್ದ ಅಧ್ಯಕ್ಷೆ, ಉಪಾಧ್ಯಕ್ಷರ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಸಜಾತಾ ಕೃಷ್ಣಪ್ಪ ಹಾಗೂ ಉಪಾಧ್ಯಕ್ಷರಾಗಿ ಆನಂದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ಬೆಳಗ್ಗೆ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ನಝೀರ್ ಸಾಬ್ ಸಭಾಂಗಣದಲ್ಲಿ ಮೈಸೂರು ಪ್ರಾದೇಶಿಕ ಚುನಾವಣಾ ಆಯುಕ್ತೆ ಹೇಮಲತಾ ಅವರ ಸಮ್ಮುಖದಲ್ಲಿ ನಡೆದ ಚುನಾವಣೆ ವೇಳೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯ ಸುಜಾತ ಕೃಷ್ಣಪ್ಪ ಹಾಗೂ ಕಾಂಗ್ರೆಸ್‍ನ ಲೋಲಾಕ್ಷಿಬಾಯಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಆನಂದಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಹೇಮಲತಾ ಆನಂದಪ್ಪ ಅವರನ್ನು ಜಿಪಂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಚಿಕ್ಕಮಗಳೂರು ಜಿಪಂನ 33 ಸದಸ್ಯರ ಪೈಕಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಹೊಂದಿರುವುದಿರಿಂದ ಸುಜಾತಾ ಕೃಷ್ಣಮೂರ್ತಿ ಅವರಿಗೆ ಹೆಚ್ಚು ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಲೋಲಾಕ್ಷಿ ಬಾಯಿ ತಮ್ಮ ನಾಮಪತ್ರವನ್ನು ಚುನಾವಣಾ ಪ್ರಕ್ರಿಯೆಯ ಕೊನೆಗಳಿಗೆಯಲ್ಲಿ ಹಿಂಪಡೆದರು. ಈ ಬೆಳವಣಿಗೆಗಳ ಬಳಿಕ ಜಿಪಂನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು. ಜಿಪಂ ಆಡಳಿತ ಹಿಡಿದಿರುವ ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ಜಿಪಂ ಅಧಿಕಾರವಧಿಯ ಬಾಕಿ ಅವಧಿಗೆ ನೂತನವಾಗಿ ಆಯ್ಕೆಯಾಗಿರುವ ಜಿಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಅಧಿಕಾರದಲ್ಲಿರಲಿದ್ದಾರೆ.

ಜಿಪಂ ನೂತನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಸುಜಾತಾ ಕೃಷ್ಣಪ್ಪ ಕೊಪ್ಪ ತಾಲೂಕಿನ ಮೇಗುಂದ ಹೋಬಳಿ ಜಿಪಂ ಕ್ಷೇತ್ರದಿಂದ 2016ರಲ್ಲಿ ಜಿಪಂ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ಅವರು ಕೊಪ್ಪ ತಾಪಂ ಸದಸ್ಯೆಯಾಗಿ, ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಆರಂಭದಿಂದಲೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅವರು ಜಿಲ್ಲಾ ಮಹಿಳಾ ಮೋರ್ಚಾದ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸುಜಾತಾ ಅವರು ಪರಿಶಿಷ್ಟ ಜಾತಿ ಸುಮುದಾಯದವರಾಗಿದ್ದು, ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿದ್ದಾರೆ. 

ಉಪಾಧ್ಯಕ್ಷ ಆನಂದಪ್ಪ ತರೀಕೆರೆ ತಾಲೂಕಿನ ಅಮೃತಾಪುರ ಜಿಪಂ ಕ್ಷೇತ್ರದ ಸದಸ್ಯರಾಗಿದ್ದು, ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಅವರು ಎರಡನೇ ಬಾರಿಗೆ ಜಿಪಂ ಸದಸ್ಯರಾಗಿದ್ದಾರೆ.

ಚುನಾವಣೆ ವೇಳೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ, ತರೀಕೆರೆ ಶಾಸಕ ಸುರೇಶ್, ವಿ.ಪ ಸದಸ್ಯ ಪ್ರಾಣೇಶ್, ಮಾಜಿ ಜಿಪಂ ಅಧ್ಯಕ್ಷೆ ಚೈತ್ರಶ್ರೀ, ಮಾಜಿ ಉಪಾದ್ಯಕ್ಷ ರಾಮಸ್ವಾಮಿ, ಬಿಜೆಪಿ ಮುಖಂಡ ಕಲ್ಮುರುಡಪ್ಪ ಸೇರಿದಂತೆ ಜಿಪಂನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

33 ಸದಸ್ಯ ಬಲ ಹೊಂದಿರುವ ಜಿಪಂನಲ್ಲಿ ಬಿಜೆಪಿ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವುದರಿಂದ ಈ ಹಿಂದೆ ಜಿಪಂ ಆಡಳಿತವನ್ನು ಬಿಜೆಪಿ ವಶಕ್ಕೆ ಪಡೆದಿತ್ತು. ಪಕ್ಷದ ಆಂತರಿಕ ಒಪ್ಪಂದದಂತೆ 20 ತಿಂಗಳ ಅವಧಿಗೆ ಜಿಪಂ ಅಧ್ಯಕ್ಷೆಯಾಗಿ ಚೈತ್ರಶ್ರೀ ಹಾಗೂ ಉಪಾಧ್ಯಕ್ಷರಾಗಿ ರಾಮಸ್ವಾಮಿ ಈ ಹಿಂದೆ ಅಧಿಕಾರ ಚಲಾಯಿಸಿದ್ದರು. ಆದರೆ ಜಿಪಂ ಮಾಜಿ ಅಧ್ಯಕ್ಷೆ ಚೈತ್ರಶ್ರೀ ತಮ್ಮ ಅಧಿಕಾರವಧಿ ಮುಗಿದಿದ್ದರೂ ರಾಜೀನಾಮೆ ನೀಡದೇ ಪಟ್ಟು ಹಿಡಿದು ಮತ್ತೆ ಮೂರು ತಿಂಗಳು ಮುಂದುವರಿದು, ಪಕ್ಷದ ಆಂತರಿಕ ಒಪ್ಪಂದವನ್ನು ಉಲ್ಲಂಘಿಸಿದ್ದರು. ಈ ಕಾರಣಕ್ಕೆ ಬಿಜೆಪಿ ಪಕ್ಷದ ಮುಖಂಡರು ಅವರ ವಿರುದ್ಧ ಶಿಸ್ತುಕ್ರಮವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿದ್ದರು. ನಂತರ ಚೈತ್ರಶ್ರೀ ಪಕ್ಷದ ಹಿರಿಯ ಮುಖಂಡರ ಸೂಚನೆ ಮೇರೆಗೆ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಲ್ಲಿ ಪತ್ತೆ ಮುಂದುವರಿದಿದ್ದರು. ಚೈತ್ರಶ್ರೀ ರಾಜೀನಾಮೆ ನೀಡಿದ ನಂತರ ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಗಳ ಅಧಿಸೂಚನೆ ಹೊರ ಬಿದ್ದ ಕಾರಣ ಸುಮಾರು 3 ತಿಂಗಳುಗಳ ಕಾಲ ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನೆನೆಗುದಿಗೆ ಬಿದ್ದಿತ್ತು. ಬಳಿಕ ಜಿಪಂ ಸಿಇಒ ಜೂ.20ಕ್ಕೆ ಚುನಾವಣೆ ನಡೆಸುವುದಾಗಿ ದಿನಾಂಕ ಘೋಷಿಸಿದ್ದರಿಂದ ಮಂಗಳವಾರ ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಸ್ಥಾನಕ್ಕೆ ಚುನಾವಣೆ ನಡೆಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News