×
Ad

ಚಿಕ್ಕಮಗಳೂರು: ಟ್ಯಾಂಕರ್ ಮಗುಚಿ ಬೆಂಕಿ ಅವಘಡ; ಲಾರಿಯ ಅವಶೇಷಗಳ ತೆರವು

Update: 2018-06-20 22:35 IST

ಚಿಕ್ಕಮಗಳೂರು, ಜೂ.20: ಮಂಗಳವಾರ ಮಧ್ಯಾಹ್ನ ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ನಡೆದ ಟ್ಯಾಂಕರ್ ಪಲ್ಟಿಯಿಂದ ಬೆಂಕಿಗೆ ಆಹುತಿಯಾದ ಡೀಸೆಲ್ ಟ್ಯಾಂಕರ್ ಲಾರಿಯನ್ನು ಬುಧವಾರ ಬೆಳಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ತೆರವುಗೊಳಿಸಿದರು.

ಲಾರಿಯ 20 ಸಾವಿರ ಲೀಟರ್ ಸಾಮರ್ಥ್ಯದ ನಾಲ್ಕು ಕಂಟೈನರ್ ನ ಟ್ಯಾಂಕರ್ ನಲ್ಲಿ ಒಂದು ಭಾಗ ಪೆಟ್ರೊಲ್ ತುಂಬಿದ್ದು, ಉಳಿದ 3 ಮೂರು ಕಂಟೈನರ್ ನಲ್ಲಿ ಡಿಸೇಲ್ ತುಂಬಿಕೊಂಡಿದ್ದು. ಅವಘಡದ ದುರಂತದಲ್ಲಿ ನಾಲ್ಕು ಸಾವಿರ ಲೀ.ನಷ್ಟು ಡೀಸೆಲ್ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ.

ಟ್ಯಾಂಕರ್‍ನಲ್ಲಿ ಡೀಸೆಲ್ ಇದ್ದುದರಿಂದ ಮತ್ತು ಲಾರಿ ಪೂರ್ಣ ಪ್ರಮಾಣದ ಬೆಂಕಿಗೆ ಆಹುತಿಯಾದ ಹಿನ್ನೆಲೆಯಲ್ಲಿ ಹೆಚ್ಚಿನ ಅವಘಡ ಸಂಭವಿಸಬಾರದೆಂಬ ಮುನ್ನೆಚ್ಚರಿಕೆಯಿಂದ ಬಿಪಿಓ ಕಂಪೆನಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಲಾರಿಯನ್ನು ಪರೀಕ್ಷಿಸಿದರು. ನಂತರ  ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲತ್ತಿ ಗ್ರಾಮದ ಹೊರಭಾಗದ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಿದರು.

ಲಾರಿಯ ಟ್ಯಾಂಕರ್ ನಲ್ಲಿದ್ದ ತೈಲವನ್ನು ಹೊರತೆಗೆದು ಬೇರೊಂದು ಟ್ಯಾಂಕರ್ ಗೆ ಭರ್ತಿ ಮಾಡಲಾಯಿತು. ಟ್ಯಾಂಕರ್ ಕೆಳಗೆ ಸಿಲುಕಿದ್ದ ದ್ವಿಚಕ್ರ ವಾಹನ ಕೂಡ ಸಂಪೂರ್ಣ ಸುಟ್ಟು ಕರಕಲಾಗಿದೆ. ಟ್ಯಾಂಕರ್‍ನಲ್ಲಿದ್ದ ತೈಲ ಭಾರತ್ ಪೆಟ್ರೋಲಿಯಂ ಕಂಪೆನಿಗೆ ಸೇರಿದ್ದು, ಟ್ಯಾಂಕರ್ ದಾವಣಗೆರೆ ಮೂಲದ ಮನೋಹರ್ ಎಂಬವರಿಗೆ ಸೇರಿದ್ದಾಗಿದೆ. ಟ್ಯಾಂಕರ್ ಮಾಲಕ ಮನೋಹರ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದರು.

ದುರಂತದಲ್ಲಿ ಗ್ರಾಮ ಪಂಚಾಯತ್‍ನ ಎರಡು ಖಾಲಿ ಮಳಿಗೆಗಳು ಮತ್ತು ಎರಡು ಮನೆಗಳು ಬೆಂಕಿಗೆ ತುತ್ತಾಗಿವೆ. ಗುರುಶಾಂತಪ್ಪ ಮತ್ತು ಮೃತ್ಯುಂಜಯ ಎಂಬವವರ ಮನೆಗಳು ಶೇ50 ರಷ್ಟು ಹಾನಿಗೊಳಗಾಗಿವೆ. ಆರ್‍ಸಿಸಿ ಮನೆಯ ಛಾವಣಿ ಬಿರುಕು ಬಿಟ್ಟಿದ್ದು, ಒಳಗಿದ್ದ ಬಾಗಿಲುಗಳು ಸೇರಿದಂತೆ ಮನೆಯ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿವೆ. ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಎರಡು ದ್ವಿಚಕ್ರವಾಹನಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಕಂದಾಯ ಇಲಾಖಾಧಿಕಾರಿಗಳು ಮನೆಯನ್ನು ಪರಿಶೀಲಿಸಿ ಹಾನಿಯಾಗಿರುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಿದ್ದು, ಘಟನೆಯಲ್ಲಿ ಹಾನಿಗೊಂಡಿರುವ ಮನೆಯ ಬಗ್ಗೆ ವರದಿ ತಯಾರಿಸಿ ಸೂಕ್ತ ಪರಿಹಾರಕ್ಕೆ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಕಳುಹಿಸಲಾಗುವುದು ಎಂದು ತರೀಕೆರೆ ಉಪವಿಭಾಗಾಧಿಕಾರಿ ಬಿ.ಬಿ.ಸರೋಜಾ ತಿಳಿಸಿದ್ದಾರೆ.

ಬೆಂಕಿಯ ಅವಘಡ ನಡೆದ ಅವಶೇಷಗಳನ್ನು ಬುಧವಾರ ಗ್ರಾಮದ ನೂರಾರು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದುದರಿಂದ ಲಾರಿಯ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಕೆಲಕಾಲ ಅಡ್ಡಿಯಾಯಿತು. ಆದರೂ ಪೊಲೀಸ್ ಸಿಬ್ಬಂದಿ ಸಮಾಧಾನದಿಂದಲೇ ಜನರನ್ನು ನಿಯಂತ್ರಿಸಿದರು. ಕಾರ್ಯಾಚರಣೆ ಮುಗಿಯುವ ತನಕವೂ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಕಾರ್ಯಾಚರಣೆ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

'ಗ್ರಾಮದ ತಿರುವಿನಲ್ಲಿ ಬಂದ ಲಾರಿಯು ನಿಯಂತ್ರಣ ಬಾರದೆ ಇದ್ದ ಪರಿಣಾಮ ಪಲ್ಟಿ ಹೊಡೆದಿದೆ. ಬಸ್‍ನಿಲ್ದಾಣದ ಬಳಿಯಿದ್ದ ಬೈಕ್‍ಯೊಂದು ಲಾರಿಯ ಕೆಳಗೆ ಸಿಲುಕಿಕೊಂಡಿದ್ದು, ಬೈಕ್‍ನ ಪೆಟ್ರೋಲ್ ಟ್ಯಾಂಕ್ ಕ್ಯಾಪ್ ಒಪನ್ ಆಗಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಲು ಕಾರಣ' ಎನ್ನುತ್ತಾರೆ ಗ್ರಾಮದ ಸ್ಥಳೀಯರು.

ಮಧ್ಯಾಹ್ನದ ವೇಳೆ ಮಲಗಿದ್ದ ಸಂದರ್ಭದ ಮನೆಯ ಮುಂಭಾಗದಲ್ಲಿ ಏನೋ ಭಾರಿ ಶಬ್ದವೊಂದು ಕೇಳಿಸಿದ ಸಂದರ್ಭ ಅದನ್ನು ನೋಡಲು ಹೊರ ಬಂದರೆ ಟ್ಯಾಂಕರ್ ಲಾರಿಯೊಂದು ಪಲ್ಟಿ ಹೊಡೆದಿತ್ತು. ನೋಡ ನೋಡುತ್ತಿದ್ದಂತೆ ಇಡೀ ಲಾರಿಯ ತುಂಬೆಲ್ಲಾ ಬೆಂಕಿಯ ಜ್ವಾಲೆ ಆವರಿಸಿತು. ನಮ್ಮ ಮನೆಯಲ್ಲಿದ್ದವರೆಲ್ಲ ಹಿಂಬಾಗಿಲ ಮೂಲಕ ಹೊರಗೆ ಬಂದು ಜೀವ ಉಳಿಸಿಕೊಳ್ಳುವಂತಾಯಿತು ಎಂದು ಹಾನಿಗೊಂಡ ಮನೆಯ ಮಾಲೀಕ ನಿವೃತ್ತ ಶಿಕ್ಷಕ ಗುರುಶಾಂತಪ್ಪ ಅಗ್ನಿಯ ಅವಡಘದ ಘಟನೆಯ ಬಗ್ಗೆ ವಿವರಿಸಿದರು.

ಬೆಂಕಿಯ ಅವಘಡದಲ್ಲಿ ಓರ್ವ ಸಜೀವ ದಹನವಾಗಿದ್ದಾನೆ ಎಂಬ ಊಹಾಪೋಹಗಳಿಗೆ ಯಾವುದೇ ಪುರಾವೆ ಸಿಕ್ಕಿಲ್ಲ. ಲಾರಿ ಚಾಲಕ ದಾಧಪೀರ್ ಒಬ್ಬನೇ ಇದ್ದ ಕಾರಣ ಕಡೂರು ಸಾರ್ವಜನಿಕ  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಆತನನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಸಂಬಂಧಿಕರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಕಡೂರು ತಾಲೂಕು ದಂಡಾಧಿಕಾರಿ ವಿಶ್ವನಾಥ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News