ಆಸಕ್ತಿ ಇಲ್ಲದಿದ್ದರೂ ನಟನೆ ಮಾಡಿಸಿ ಪ್ರತಿಭೆ ಹೊರತೆಗೆದರು: ‘ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ

Update: 2018-06-20 18:02 GMT

ಮಂಡ್ಯ, ಜೂ.20: ಸಿನಿಮಾದಲ್ಲಿ ಆಸಕ್ತಿ ಇಲ್ಲದಿದ್ದರೂ ನನ್ನ ಕೈಲಿ ನಟನೆ ಮಾಡಿಸಿ ನನ್ನಲ್ಲಿರುವ ಪ್ರತಿಭೆಯನ್ನು ಹೊರತೆಗೆದರು ಎಂದು ‘ತಿಥಿ’ ಸಿನಿಮಾದ ನಟ ಗಡ್ಡಪ್ಪ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳ ವೇದಿಕೆ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ನಾನು ನಾಲ್ಕು ಹೆಣ್ಮಕ್ಕಳ ತಂದೆಯಾಗಿದ್ದೀನೆ. ನನಗೆ ಅಭಿನಯ ಮಾಡಲು ಆಗಲ್ಲ ಎಂದರೂ ಬಿಡದೆ ನನ್ನೊಳಗೂ ಪ್ರತಿಭೆಯನ್ನು ಗುರುತಿಸುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಸಿನಿಮಾ ಕ್ಷೇತ್ರ ತುಂಬ ದೊಡ್ಡದಾಗಿ ಬೆಳೆದಿದೆ. ನಾನು ನಾಲ್ಕಾರು ಚಿತ್ರಗಳಲ್ಲಿ ನಟನೆ ಮಾಡಿದೆ, ತುಂಬ ಖುಷಿಯಾಗುತ್ತದೆ. ಗಡ್ಡಪ್ಪ ಯಾರು ಅಂತ ಜನಗುರುತಿಸುತ್ತಾರೆ, ಜೀವನ ಸರಳವಾಗಿ ಸುಂದರವಾಗಿದೆ ಎಂದು ಅವರು ತಿಳಿಸಿದರು.

ನನ್ನ ಜೀವನಕ್ಕಾಗಿ ಗ್ರಾಮದಲ್ಲಿ ಹೊಟೇಲು, ಅಂಗಡಿ ಹಾಕಿ ನಾಲ್ಗುಜನ ಹೆಣ್ಣುಮಕ್ಕಳನ್ನು ಸಾಕಿ ಜೀವನ ನಡೆಸುವುದು ತುಂಬ ಕಷ್ಟ ಇದೆ. ಸಿನಿಮಾ ಗಿನಿಮಾ ನಂಗೆ ಇಷ್ಟ ಇಲ್ಲಾ ಎಂದರೂ ಸಂಬಂಧಿಕರ ಒತ್ತಾಯದ ಮೇರೆಗೆ ಒಪ್ಪಿಕೊಂಡೆ. ಈಗ ರಾಜ್ಯಾದ್ಯಂತ ಉತ್ತಮ ಹೆಸರಾಗಿದೆ ಎಂದು ಅವರು ತಮ್ಮ ಅನುಭವ ಹೇಳಿಕೊಂಡರು.

ವೇದಿಕೆ ಅಧ್ಯಕ್ಷ ಮಣಿಕಂಠರಾಜ್ ಮಾತನಾಡಿ, ಸಫಾಯಿ ಕರ್ಮಿಗಳು ಮತ್ತು ಪೌರಕಾರ್ಮಿಕರು ಸಂಘಟಿತವಾಗಿ ಸರಕಾರಿ ಸೌಲಭ್ಯ ಮತ್ತು ರಾಜಕೀಯ ಶಕ್ತಿಯಾಗಿ ಬೆಳೆಯಬೇಕಿದೆ. ಆದರೆ, ನಮ್ಮಲ್ಲೇ ಕಾಲೆಳೆಯುವ ಮಂದಿ ಇರುವುದು ದುರಂತ ಎಂದು ವಿಷಾದಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸಫಾಯಿ ಮತ್ತು ಪೌರಕಾರ್ಮಿಕರ ಕಲ್ಯಾಣ ಯೋಜನೆಗಳನ್ನು ಜನರಿಗೆ ತಿಳಿಸಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದ್ದು, ಸಾಲಸೌಲಭ್ಯಗಳನ್ನು ಪಡೆದುಕೊಳ್ಳಲು ಎಲ್ಲರೂ ಮುಂದಾಗಬೇಕಿದೆ ಎಂದು ಅವರು ಸಲಹೆ ನೀಡಿದರು. 

ವೇದಿಕೆಯಲ್ಲಿ ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ್, ಗ್ರಾಪಂ. ಸದಸ್ಯೆ ಸರಸಮ್ಮ, ಸುಮತಿ, ರಾಮಣ್ಣ, ಲೋಕೇಶ್, ಸಿದ್ದಾರಾಜು, ರವಿ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News