ಮಂಡ್ಯ: ವೃತ್ತಿ, ಹವ್ಯಾಸಿ ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭ

Update: 2018-06-20 18:09 GMT

ಮಂಡ್ಯ, ಜೂ.20: ರಂಗಭೂಮಿ ಕ್ಷೇತ್ರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ರಂಗಮಂದಿರ ನಿರ್ಮಾಣವಾಗಬೇಕು. ಅದೇ ರೀತಿ ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿ ರಂಗಭೂಮಿ ಶಿಕ್ಷಕರನ್ನು ನೇಮಿಸುವ ಅವಶ್ಯಕತೆ ಇದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಅಭಿಪ್ರಾಯಪಟ್ಟಿದ್ದಾರೆ.

ಜನದನಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕರ್ನಾಟಕ ಸಂಘದ ವತಿಯಿಂದ ಕರ್ನಾಟಕ ಸಂಘದ ಆವರಣದಲ್ಲಿ ರಂಗಭೂಮಿ ಹಿರಿಯ ಕಲಾವಿದ ಟಿ.ಕೆಂಚೇಗೌಡ ಕಾಳೇನಹಳ್ಳಿ ಅವರಿಗೆ ಬೋರೇಗೌಡ ವೃತ್ತಿ ರಂಗಭೂಮಿ ಪ್ರಶಸ್ತಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದ ಎಂ.ಆರ್.ಕೃಷ್ಣರಾವ್(ಬ್ಯಾಂಕ್ ವಿಜಿ) ಅವರಿಗೆ ಕೋಣನಹಳ್ಳಿ ಕೆ.ಚಂದ್ರಶೇಖರ್ ಹವ್ಯಾಸಿ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಹಿಂದೆ ಮಕ್ಕಳಲ್ಲಿ ಬಿಎ, ಬಿಕಾಂ, ಎಂಜಿನಿಯರ್, ಡಾಕ್ಟರ್ ಓದಬೇಕೆಂಬ ಹಂಬಲವಿರುತ್ತಿತ್ತು. ಈಗ ಕಾಲಘಟ್ಟ ಬದಲಾಗಿದ್ದು, ಸಿನಿಮಾ ಹಾಗೂ ರಂಗಭೂಮಿಯತ್ತ ಆಕರ್ಷಿತರಾಗುತ್ತಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಒದಗಿಸುವ ಮೂಲಕ ನಾಡಿನ ಸಾಂಸ್ಕೃತಿಕ ರಾಯಭಾರಿಗಳನ್ನಾಗಿ ರೂಪಿಸಬೇಕಾಗಿದೆ. ಶಾಸಕ ಎಂ.ಶ್ರೀನಿವಾಸ್ ಅವರು ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಬೇಕು ಎಂದು ಅವರು ಮನವಿ ಮಾಡಿದರು.

ಅಕಾಡೆಮಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ಅಕಾಡೆಮಿಯ ಕಾರ್ಯಕ್ರಮಗಳು ಸಾರ್ವಜನಿಕರ ಕಣ್ಣಿಗೆ ಕಾಣುವುದಿಲ್ಲ. ಉತ್ಸವಗಳು, ನಾಟಕ ಪ್ರಚಾರ ಪಡೆಯುತ್ತವೆ. ದಾಖಲಾತಿಕರಣ ಇನ್ನಿತರೆ ಕಾರ್ಯಗಳನ್ನು ನೋಡಬೇಕಾದರೆ ಅಕಾಡೆಮಿಯ ವೆಬ್‍ಸೈಟ್‍ನಲ್ಲಿ ನೋಡಬೇಕು ಎಂದು ಅವರು ಹೇಳಿದರು.

ಕೆ.ವಿ.ಶಂಕರಗೌಡರು ದೂರದೃಷ್ಟಿ ಇಟ್ಟುಕೊಂಡು ಅಕಾಡೆಮಿ ಸ್ಥಾಪಿಸಿದರು. ಪ್ರಥಮ ಅಧ್ಯಕ್ಷರಾಗಿ ಅಕಾಡೆಮಿಯನ್ನು ಮುನ್ನಡೆಸಿದರು. ಇಂತಹ ಸ್ಥಳದಲ್ಲಿ ನಾನು ಕುಳಿತಿರುವುದು ಸಂತೋಷ ತಂದಿದೆ. ನನ್ನ ಸಹಪಾಠಿಗಳಾದ ಕೆಂಚೇಗೌಡ ಹಾಗೂ ಬ್ಯಾಂಕ್ ವಿಜಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸ ತಂದಿದೆ ಎಂದರು. ಅಕಾಡೆಮಿಗೆ ಅನೇಕ ಮಂದಿ ಭೇಟಿ ನೀಡಿ, ಪ್ರಶಸ್ತಿಗಾಗಿ ದುಂಬಾಲು ಬೀಳುತ್ತಾರೆ. ಆದರೆ, ಜನರ ಚಪ್ಪಾಳೆಯ ಮುಂದೆ ಪ್ರಶಸ್ತಿಗೆ ಬೆಲೆ ಇಲ್ಲ. ಅವರ ಪಾತ್ರ, ಅಭಿನಯ ನೋಡಿ ಜನ ಗುರುತಿಸುತ್ತಾರೆಯೇ ಹೊರತು ಪ್ರಶಸ್ತಿಗಳಿಂದಲ್ಲ. ಪ್ರಜೆಗಳ ಪ್ರೀತಿಯ ಸಂಕೇತವಾಗಿ ಸರಕಾರ ಪ್ರಶಸ್ತಿ ನೀಡುತ್ತದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಯಾರೂ ನಟರು ಹುಟ್ಟಿಲ್ಲ. ಹಳ್ಳಿಯಿಂದಲೇ ಹುಟ್ಟಿ ಬಂದವರು. ನೆಲದ ಮಣ್ಣಿನ ವಾಸನೆಯಿಂದ ಎದ್ದು ಬಂದವರು. ಉದ್ಯೋಗ ಅರಸಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆ ಕಂಡವರು ದೊಡ್ಡ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ನಗರದಲ್ಲಿರುವ ಮಕ್ಕಳು ಟಿವಿ ನೋಡಿಕೊಂಡು, ಪೋಷಕರೊಂದಿಗೆ ಓಡಾಡಿಕೊಂಡಿರುತ್ತಾರೆ. ಕಾಂಕ್ರಿಟ್ ಕಾಡಿನಲ್ಲಿ ಅವರಿಗೆ ಮಣ್ಣಿನ ವಾಸನೆಯೇ ಗೊತ್ತಿಲ್ಲ. ಕನ್ನಡ ಕಲಿಯುವುದು 5ನೇ ತರಗತಿ ನಂತರವಷ್ಟೇ. ಅವರಿಗೆ ಪ್ರತಿಭೆ ಇರುವುದಿಲ್ಲ ಎಂದರು.

ಶಾಸಕ ಎಂ.ಶ್ರೀನಿವಾಸ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಜನದನಿ ಸಾಂಸ್ಕøತಿಕ ಟ್ರಸ್ಟ್ ಅಧ್ಯಕ್ಷ ಕೆ.ಜಯರಾಮು, ಚಂದಗಾಲು ಲೋಕೇಶ್, ಹರೀಶ್‍ಕುಮಾರ್, ಎಚ್.ಡಿ.ಸೋಮಶೇಖರ್, ಸಿ.ಎಸ್.ರಾಮಕೃಷ್ಣ ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News