ಚಿಕ್ಕಮಗಳೂರು: ಐವರು ಶ್ರೀಗಂಧ ಚೋರರ ಬಂಧನ; 45 ಕೆಜಿ ಶ್ರೀಗಂಧ ವಶ

Update: 2018-06-21 11:52 GMT

ಚಿಕ್ಕಮಗಳೂರು, ಜೂ.21: ತಾಲೂಕಿನ ಚುರ್ಚೆಗುಡ್ಡ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಮೂವರು ಶ್ರೀಗಂಧ ಚೋರರನ್ನು ಬಂಧಿಸಿದ ಬೆನ್ನಲ್ಲೇ ಇಲ್ಲಿನ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರ ಮುಂಜಾನೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಕಾಮೇನಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ಆರೋಪದ ಮೇರೆಗೆ ಐವರು ಶ್ರೀಗಂಧ ಚೋರರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿಯ ಅಮ್ಮನಹಾಳು, ಪಾದದಮನೆ ಗ್ರಾಮದ ಸುಂದರ್, ಶಶಿ, ಲೋಕೇಶ್, ರಾಮ, ರಮೇಶ್ ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ 45 ಕೆಜಿ ಶ್ರೀಗಂಧದ ಮರಗಳ ತುಂಡುಗಳೂ ಸೇರಿದಂತೆ 1 ಬೈಕ್, ಕತ್ತಿ, ಟೇಪ್, ಗರಗಸ, ಬಟ್ಟೆ, ಟೆಂಟ್ ಮತ್ತಿತರ ವಸ್ತುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಗುರುವಾರ ಬೆಳಗಿನ ಜಾವ ಮೂರರ ಸಮಯದಲ್ಲಿ ಕಾಮೇನಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯ ಉಯ್ಯಲುಕಲ್ಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿಯುತ್ತಿರುವ ಬಗ್ಗೆ ಚಿಕ್ಕಮಗಳೂರು ಅರಣ್ಯ ಇಲಾಖೆಯ ಆರ್‍ಎಫ್‍ಒ ಅವರಿಗೆ ದೂರವಾಣಿ ಮೂಲಕ ಖಚಿತ ಮಾಹಿತಿ ಬಂದಿತ್ತು. ಕೂಡಲೇ ಆರ್‍ಎಫ್‍ಓ ಶಿಲ್ಪಾ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಟೆಂಟ್ ಹಾಕಿಕೊಂಡು ಶ್ರೀಗಂಧದದ ಮರಗಳನ್ನು ಕಡಿಯುತ್ತಿದ್ದ ಐವರು ಆರೋಪಿಗಳ ತಂಡದ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ಬಂಧಿತರಿಂದ 45 ಕೆಜಿ ಶ್ರೀಗಂಧದ ತುಂಡುಗಳು ಸೇರಿಂದಂತೆ ಕೃತ್ಯಕ್ಕೆ ಬಳಸಿದ ಇತರ ಪರಿಕರಗಳು ಹಾಗೂ 1 ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ನ್ಯಾಯಾಲಾಯಕ್ಕೆ ಹಾಜರು ಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಉಪ ವಲಯಾರಣ್ಯಾಧಿಕಾರಿಗಳಾದ ಗೌತಮ್, ವೆಂಕಟೇಶ್, ನವ ರಕ್ಷಕರಾದ ನಂದೀಶ್, ವಸಂತ್, ನಾಗೇಂದ್ರ, ಕುಮಾರಸ್ವಾಮಿ, ಪುರುಷೋತ್ತಮ, ಅಶೋಕ್, ಮಣಿ ಹಾಗೂ ಚಿದಾನಂದ್ ಭಾಗವಹಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News