ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಸತೀಶ್ ಜಾರಕಿಹೊಳಿ

Update: 2018-06-21 14:04 GMT

ಬೆಂಗಳೂರು, ಜೂ. 21: ಪಕ್ಷದ ವರಿಷ್ಠರೊಂದಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹುದ್ದೆ ಬಗ್ಗೆ ಚರ್ಚೆಯಾಗಿದ್ದು, ನನಗೆ ಸದ್ಯಕ್ಕೆ ಆ ಸ್ಥಾನ ಬೇಡ. ಐದು ವರ್ಷಗಳ ಬಳಿಕ ಈ ಬಗ್ಗೆ ನೋಡೋಣ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಕೆಪಿಸಿಸಿ ಅಧ್ಯಕ್ಷರಾಗುವಂತೆ ವರಿಷ್ಠರು ಕೇಳಿದರು. ಆದರೆ, ನಾನು ಈಗ ಆ ಸ್ಥಾನ ನನಗೆ ಬೇಡ. ಈಗಾಗಲೇ ಆ ಸ್ಥಾನಕ್ಕೆ ಹಿರಿಯರು ಮತ್ತು ಕಿರಿಯರ ಮಧ್ಯೆ ಪೈಪೋಟಿ ಏರ್ಪಟ್ಟಿದೆ ಎಂದರು.

ದಿನೇಶ್ ಗುಂಡೂರಾವ್, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ ಹುದ್ದೆ ರೇಸ್‌ನಲ್ಲಿದ್ದು, ನನಗೆ ಸದ್ಯಕ್ಕೆ ಆ ಸ್ಥಾನ ಬೇಡ. 5 ವರ್ಷಗಳ ಬಳಿಕ ನೋಡ್ತಿನಿ ಎಂದು ಹೇಳಿದ್ದೇನೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ನನಗಾಗಿ ಸಚಿವ ಸ್ಥಾನ ಕೇಳಿಲ್ಲ. ಆದರೆ, ಅರ್ಹ ಶಾಸಕರಿಗೆ ಸಚಿವ ಸ್ಥಾನ ಕೇಳಿದ್ದೇನೆ. ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಎರಡು ವರ್ಷಗಳ ಬಳಿಕ ಸಚಿವ ನೀಡುವ ಭರವಸೆ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ 70 ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಅನ್ಯಾಯ ಆಗುತ್ತಿದೆ ಎಂದು ದೂರಿದರು.

ಪಕ್ಷದ ವರಿಷ್ಠರ ಬಳಿ ನಾನು ಯಾರೊಬ್ಬರ ವಿರುದ್ಧವೂ ಹೇಳಿಕೆ ನೀಡಿಲ್ಲ. ನನ್ನ ವಿಚಾರವನ್ನಷ್ಟೇ ಮಾತನಾಡಿದ್ದೇನೆ ಎಂದ ಅವರು, ಕಳೆದ ಬಾರಿ ಹೊಸ ಸರಕಾರ ರಚನೆ ಮಾಡಿದಾಗ ಬಜೆಟ್ ಮಂಡನೆ ಮಾಡಿದ್ದೆವು, ಇದೀಗ ಮೈತ್ರಿ ಸರಕಾರ ಬಜೆಟ್ ಮಂಡನೆ ಮಾಡಿದರೆ ತಪ್ಪೇನಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News