ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಕೇಂದ್ರದ ಮೊರೆ ಹೋಗಿರುವುದು ನಾಚಿಕೆಗೇಡು: ಸಂಸದೆ ಶೋಭಾ

Update: 2018-06-21 14:57 GMT

ಚಿಕ್ಕಮಗಳೂರು, ಜೂ.21: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದು ಯಾವಾಗ ಸರಕಾರ ಬೀಳುತ್ತದೋ ಎಂಬ ಆತಂಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಕಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಇನ್ನೂ ಟೇಕಾಫ್ ಆಗಿಲ್ಲ, ಮಂತ್ರಿ ಮಂಡಲದ ರಚನೆಯೂ ಸಮರ್ಪಕವಾಗಿಲ್ಲ ಎಂದು ಆರೋಪಿಸಿದ ಅವರು, ಸಾಲಮನ್ನಾ ಮಾಡುಲು ಸಿಎಂ ಕುಮಾರಸ್ವಾಮಿ ಕೇಂದ್ರ ಸರಕಾರದ ಮೊರೆ ಹೋಗಿದ್ದಾರೆ. ಉತ್ತರ ಪ್ರದೇಶ ಸರಕಾರ 1ಲಕ್ಷ ರೈತರ ಸಾಲ ಮನ್ನಾ ಮಾಡಿದೆ. ಮಹಾರಾಷ್ಟ್ರದಲ್ಲೂ ರೈತರ ಸಾಲ ಮನ್ನಾ ಮಾಡಲಾಗಿದೆ. ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸುತ್ತಿರುವ ಪಂಜಾಬಿನಲ್ಲಿಯೂ ರೈತರ ಸಾಲಮನ್ನಾ ಮಾಡಲಾಗಿದೆ. ಆದರೆ ನಮ್ಮ ರಾಜ್ಯ ಸರಕಾರ ಕೇಂದ್ರದ ನೆರವು ಕೇಳುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.

ಐಟಿ ಸಂಸ್ಥೆಯನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ದೇಶದಲ್ಲಿ 50 ವರ್ಷಗಳಿಗಿಂತ ಹೆಚ್ಚಿನ ಕಾಲ ಕಾಂಗ್ರೆಸ್ ಆಡಳಿತ ಮಾಡಿದೆ. ಆಗ ಅವರು ಐಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ತಪ್ಪು ಮಾಡಿದವರು ಐಟಿಗೆ ಹೆದರುತ್ತಾರೆ. ತಪ್ಪು ಮಾಡದವರಿಗೆ ಯಾಕೆ ಹೆದರಿಕೆ. ತೆರಿಗೆ ಕಟ್ಟಿದವರಿಗೆ ಅದರ ಭಯ ಇರುವುದಿಲ್ಲ. ಅಧಿಕಾರಿಗಳು ಹಗರಣಗಳನ್ನು ಬಯಲಿಗೆ ಎಳೆದರೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News