ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ರೋಷನ್ ಬೇಗ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

Update: 2018-06-21 16:05 GMT

ಬೆಂಗಳೂರು, ಜೂ.21: ಆದಾಯ ಮೀರಿ ಸುಮಾರು 56 ಲಕ್ಷ ರೂ. ಮೌಲ್ಯದ ಆಸ್ತಿ ಗಳಿಕೆ ಮಾಡಿದ ಆರೋಪ ಸಂಬಂಧ ಮಾಜಿ ಸಚಿವ ಹಾಗೂ ಶಾಸಕ ರೋಷನ್ ಬೇಗ್ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್‌ಗೆ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಲೋಕಾಯುಕ್ತ ನ್ಯಾಯಾಲಯದ ವಿಚಾರಣೆ ಮತ್ತು ಸಮನ್ಸ್ ರದ್ದುಪಡಿಸುವಂತೆ ಕೋರಿ ರೋಷನ್ ಬೇಗ್, ಪತ್ನಿ ಸಬೀನಾ ರೋಷನ್ ಮತ್ತು ಪುತ್ರ ರುಮನ್ ಬೇಗ್ ರೆಹಮಾನ್ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧದ ಲೋಕಾಯುಕ್ತ ಕೋಟ್ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಹಾಗೆಯೇ, ಲೋಕಾಯುಕ್ತ ಪೊಲೀಸರು ಮತ್ತು ಪ್ರಕರಣದ ಖಾಸಗಿ ದೂರುದಾರ ಅಬ್ದುಲ್ ಹಕ್ ಸುರತಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಪ್ರಕರಣವೇನು: ರೋಷನ್ ಬೇಗ್ ತಮ್ಮ ಅಧಿಕಾರ ಹಾಗೂ ಸ್ಥಾನ ದುರ್ಬಳಕೆ ಮಾಡಿ ಮತ್ತು ಭ್ರಷ್ಟಾಚಾರ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಅಬ್ದುಲ್ ಹಕ್ ಸುರತಿ, 2012ರ ಜೂ.14ರಂದು ಲೋಕಾಯುಕ್ತ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದ್ದರು. ಲೋಕಾಯುಕ್ತ ವಿಶೇಷ ನ್ಯಾಯಾಲಯವು ದೂರಿನ ತನಿಖೆಗೆ ಆದೇಶಿಸಿತ್ತು. ಅದರಂತೆ ಲೋಕಾಯುಕ್ತ ಪೊಲೀಸರು ಬೇಗ್ ಮತ್ತವರ ಕುಟುಂಬ ಸದಸ್ಯರ ವಿರುದ್ಧ 2012ರ ಜು.12ರಂದು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.

ತನಿಖೆ ಪೂರ್ಣಗೊಳಿಸಿದ್ದ ಲೋಕಾಯುಕ್ತ ಪೊಲೀಸರು 2014ರ ಎ.22ರಂದು ಲೋಕಾಯುಕ್ತ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಸಿ, ರೋಷನ್ ಬೇಗ್ ಮತ್ತವರ ಪತ್ನಿ ಹಾಗೂ ಪುತ್ರ ವಿರುದ್ಧದ ಆರೋಪಗಳನ್ನು ಕೈ ಬಿಟ್ಟಿದ್ದರು. ಈ ಬಿ ರಿಫೋರ್ಟ್ ಅನ್ನು ದೂರುದಾರ ಪ್ರತಿಭಟಿಸಿದ್ದರು. ಇದಾದ ನಾಲ್ಕು ವರ್ಷಗಳ ನಂತರ 2018ರ ಮೇ 5ರಂದು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದ್ದ ಲೋಕಾಯುಕ್ತ ಕೋರ್ಟ್, ರೋಷನ್ ಬೇಗ್ ಮತ್ತವರ ಕುಟುಂಬ ಸದಸ್ಯರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ವಿಚಾರಣೆ ರದ್ದತಿಗೆ ಮನವಿ: ಅರ್ಜಿದಾರರು ವಿರುದ್ಧದ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಲಭ್ಯವಾದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಕೇವಲ 56.71 ಲಕ್ಷ ರೂ. ನಷ್ಟು ಆದಾಯ ಮೀರಿದ ಆಸ್ತಿ ಗಳಿಸಲಾಗಿದೆ ಎಂಬ ಕಾರಣಕ್ಕೆ ಪ್ರಕರಣವನ್ನು ಸಮನ್ಸ್ ಜಾರಿ ಮಾಡಿರುವುದು ಕಾನೂನು ಬಾಹಿರ. ಆದರೆ, ಆದಾಯ ಮೀರಿದ ಆಸ್ತಿ ಪ್ರಮಾಣವು ಶೇ.10ಕ್ಕಿಂತ ಕಡಿಮೆಯಿದ್ದರೆ, ಅದು ಭ್ರಷ್ಟಾಚಾರ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ದುರುದ್ದೇಶದಿಂದ ದೂರು ದಾಖಲಿಸಿದ್ದರೂ ಹಾಗೂ ದೂರುದಾರ 2014ರಿಂದ ಪ್ರಕರಣ ಮುಂದುವರಿಸದಿದ್ದರೂ ಆ ಬಗ್ಗೆ ಲೋಕಾಯುಕ್ತ ಕೋರ್ಟ್ ಗಮನ ಹರಿಸದೆ, ಪ್ರಕರಣವನ್ನ ಅಂಗೀಕರಿಸುವುದು ಸರಿಯಲ್ಲ. ಹೀಗಾಗಿ, ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News