ನಿವೇಶನ ಹಂಚಿಕೆಯಲ್ಲಿ ಹಳೆಯ ಅರ್ಜಿಗಳನ್ನು ಮೊದಲು ಪರಿಗಣಿಸಿ: ಎಐಟಿಯುಸಿ ಆಗ್ರಹ
ಮಡಿಕೇರಿ, ಜೂ.21: ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವುದಕ್ಕಾಗಿ ಗ್ರಾಮ ಪಂಚಾಯತ್ ಗಳು ತರಾತುರಿಯಲ್ಲಿ ಅರ್ಜಿ ಸ್ವೀಕಾರಕ್ಕೆ ಮುಂದಾಗಿದ್ದು, ಹೊಸ ಅರ್ಜಿಗಳಿಗೂ ಮೊದಲು ಕೊಡಗಿನ ದೀನ ದಲಿತರು ಹಾಗೂ ಕೂಲಿ ಕಾರ್ಮಿಕರು ಈ ಹಿಂದೆ ಸಲ್ಲಿಸಿರುವ ಅರ್ಜಿಗಳನ್ನು ಮೊದಲು ಪರಿಗಣಿಸಬೇಕೆಂದು ಯುನೈಟೆಡ್ ಪ್ಲಾಂಟೇಷನ್ಸ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ಮತ್ತು ಆದಿ ದ್ರಾವಿಡ ಸಮಾಜ ಸೇವಾ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಹೆಚ್.ಎಂ. ಸೋಮಪ್ಪ, ಯಾರ ಗಮನಕ್ಕೂ ತಾರದ, ಗ್ರಾಮ ಪಂಚಾಯತ್ ಗಳ ಮೂಲಕ ನಿವೇಶನ ಹಂಚಿಕೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತರಾತುರಿಯಲ್ಲಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಜೂನ್ 25 ಕಡೆಯ ದಿನವೆಂದು ಹೇಳಲಾಗುತ್ತಿದೆ. ಆದರೆ, ಕಳೆದ 15 ವರ್ಷಗಳಿಂದ ನಿರಂತರವಾಗಿ ಎಐಟಿಯುಸಿ ಸಂಘಟನೆ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸುತ್ತಲೇ ಬರುತ್ತಿದೆ. ಇಲ್ಲಿಯವರೆಗೆ ಈ ಅರ್ಜಿಗಳನ್ನು ವಿಲೇವಾರಿ ಮಾಡುವ ಕಾರ್ಯ ನಡೆದಿಲ್ಲ. ಹಳೆಯ ಅರ್ಜಿಗಳನ್ನು ಮೊದಲು ಪರಿಗಣಿಸಿ ಇದರ ವರದಿಯನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಸೋಮಪ್ಪ ಒತ್ತಾಯಿಸಿದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಿವೇಶನಕ್ಕಾಗಿ ಅರ್ಜಿ ಸ್ವೀಕರಿಸುವ ಚುನಾವಣಾ ಗಿಮಿಕ್ ನಡೆಯುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ ಅವರು, ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭ ಮಾತ್ರ ನಿವೇಶನ ಹಂಚುವ ಹುಸಿ ಭರವಸೆಯನ್ನು ನೀಡುತ್ತಲೆ ಬಂದಿವೆ ಎಂದು ಆರೋಪಿಸಿದರು. ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿದ್ದರೂ ಜಿಲ್ಲೆಯ ದೀನದಲಿತರು ಹಾಗೂ ಕಾರ್ಮಿಕರು ಸ್ವಂತ ಸೂರಿಲ್ಲದೆ, ಲೈನ್ ಮನೆಗಳಲ್ಲೆ ಜೀವನ ಕಳೆಯಬೇಕಾದ ದುಸ್ಥಿತಿ ಇದೆ. ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಪೈಸಾರಿ ಜಾಗವನ್ನು ತೆರವುಗೊಳಿಸಿ ಬಡವರಿಗೆ ಹಂಚುವಂತೆ ಒತ್ತಾಯಿಸುತ್ತಲೆ ಬಂದಿದ್ದರೂ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸೋಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಕುಂಬೂರು ಗ್ರಾಮದಲ್ಲಿ 29 ಏಕರೆ ಹಾಗೂ ಬಿಳಿಗೇರಿ ಗ್ರಾಮದಲ್ಲಿ 46 ಏಕರೆ ಪೈಸಾರಿ ಜಾಗ ಬಂಡವಾಳಶಾಹಿಗಳ ವಶದಲ್ಲಿದ್ದು, ಇದರ ಆರ್‍ಟಿಸಿಯನ್ನು ಜಿಲ್ಲಾಡಳಿತಕ್ಕೆ ನೀಡಿ, ಒತ್ತುವರಿ ತೆರವಿಗೆ ಒತ್ತಾಯಿಸಿದ್ದರು ಇಲ್ಲಿಯವರೆಗೆ ತೆರವು ಕಾರ್ಯಾಚರಣೆ ನಡೆಸಿಲ್ಲವೆಂದು ಆರೋಪಿಸಿದರು. ಉಳ್ಳವರ ಬಳಿ ಅಕ್ರಮವಾಗಿ ಇರುವ ಪೈಸಾರಿ ಜಮೀನನ್ನು ತೆರವುಗೊಳಿಸಿ ಬಡವರಿಗೆ ಹಂಚಿಕೆ ಮಾಡದಿದ್ದಲ್ಲಿ ದಿಡ್ಡಳ್ಳಿ ಮಾದರಿಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಸೋಮಪ್ಪ ಎಚ್ಚರಿಕೆ ನೀಡಿದರು.
ಆದಿ ದ್ರಾವಿಡ ಎಂದು ನಮೂದಿಸಿ
ಜಾತಿ ದೃಢೀಕರಣ ಪತ್ರದಲ್ಲಿ ಆದಿದ್ರಾವಿಡ ಜಾತಿಯನ್ನು ನಮೂದಿಸದೆ ಇರುವುದರಿಂದ ಈ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಅನೇಕ ವರ್ಷಗಳಿಂದ ಜಾತಿ ದೃಢೀಕರಣ ಪತ್ರದಲ್ಲಿ ಆದಿ ದ್ರಾವಿಡ ಎಂದು ನಮೂದಿಸುವಂತೆ ಮನವಿ ಮಾಡಿಕೊಂಡು ಬಂದಿದ್ದರೂ ಆಗಿಂದಾಗ್ಗೆ ಅಧಿಕಾರಿಗಳು ಬದಲಾಗುತ್ತಿರುವುದರಿಂದ ಮಾಹಿತಿಯ ಕೊರತೆ ಎದುರಾಗಿ ಆದಿ ದ್ರಾವಿಡ ಎಂದು ನಮೂದಿಸಲು ಸಾಧ್ಯವಾಗುತ್ತಿಲ್ಲವೆಂದು ಸೋಮಪ್ಪ ತಿಳಿಸಿದರು.
ಈ ವಿಚಾರದಲ್ಲಿ ಜಿಲ್ಲೆಯಾದ್ಯಂತ ನಾಡಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದೆಂದು ತಿಳಿಸಿದ ಅವರು, ಮೊದಲ ಹಂತದ ಪ್ರತಿಭಟನೆ ಸುಂಟಿಕೊಪ್ಪದಲ್ಲಿ ನಡೆಯಲಿದೆ ಎಂದರು.
ಆದಿದ್ರಾವಿಡ ಸೇವಾ ಸಮಾಜದ ಗೌರವಾಧ್ಯಕ್ಷರಾದ ಪಿ.ವಿ. ಬಾಬು ಮಾತನಾಡಿ, ಜಾತಿ ದೃಢೀಕರಣ ಪತ್ರದಲ್ಲಿ ಆದಿ ದ್ರಾವಿಡವೆಂದು ನಮೂದಿಸುವಂತೆ ಒತ್ತಾಯಿಸಿ ಜೂ.25 ರಂದು ಸುಂಟಿಕೊಪ್ಪ ನಾಡಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ತಿಳಿಸಿದರು. ನಮ್ಮಹಲವು ವರ್ಷಗಳ ಬೇಡಿಕೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಸೋಮವಾರಪೇಟೆ ಕಾರ್ಯದರ್ಶಿ ಪಿ.ಟಿ. ಸುಂದರ, ಆದಿದ್ರಾವಿಡ ಸಮಾಜದ ಉಪಾಧ್ಯಕ್ಷ ಪಿ.ಎಲ್. ಸುರೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.