ಅತಿ ಮಳೆಯಿಂದ ಕಾಫಿ ಬೆಳೆಗೆ ಹಾನಿ: ಮುಂಜಾಗೃತಾ ಕ್ರಮಕ್ಕೆ ಕಾಫಿ ಸಂಶೋಧನಾ ಕೇಂದ್ರ ಸಲಹೆ

Update: 2018-06-21 16:44 GMT

ಮಡಿಕೇರಿ, ಜೂ.21: ಕಳೆದ ಒಂದು ವಾರದಲ್ಲಿ, ಬಹುಪಾಲು ಕಾಫಿ ಪ್ರದೇಶಗಳಾದ ಕರ್ನಾಟಕದ ಚಿಕ್ಕಮಗಳೂರು, ಸಕಲೇಶಪುರ, ಕೊಡಗು ಮತ್ತು ಕೇರಳದ ವಯನಾಡಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. ಕೆಲವೊಮ್ಮೆ 3, 4 ದಿನಗಳಲ್ಲಿ 30 ರಿಂದ 40 ಇಂಚಿನಷ್ಟು ಮಳೆ ಸುರಿದಿದೆ.  

ಹೆಚ್ಚುವರಿ ಮಳೆಯಿಂದಾಗಿ ಗಿಡದ ಬೇರಿನ ಭಾಗದಲ್ಲಿ ಅತಿಯಾದ ನೀರು ಶೇಖರಣೆಯಾಗುವುದರಿಂದ ತಳದಲ್ಲಿ ತೇವಾಂಶ ಹೆಚ್ಚಾಗುವ ಪರಿಸ್ಥಿತಿ ಉಂಟು ಮಾಡುತ್ತದೆ. ಕೆಲವು ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಈ ಅಹಿತಕರ ಹವಾಮಾನ ವೈಪರಿತ್ಯದಿಂದಾಗಿ, ವಿಶೇಷವಾಗಿ ರೋಬಸ್ಟಾ ಕಾಫಿಗಳಲ್ಲಿ ಕಪ್ಪು ಕೊಳೆತ (ಬ್ಲಾಕ್‍ರಾಟ್) ಮತ್ತು ಕಾಂಡ ಕೊಳೆತ (ಸ್ಟಾಕ್‍ರಾಟ್) ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚಾರುತ್ತದೆ. ಆದ್ದರಿಂದ ಎಲ್ಲಾ ಕಾಫಿ ಬೆಳೆಗಾರರಿಗೆ ಅಕಾಲಿಕ ಹಣ್ಣಿನ ಉದುರುವಿಕೆ ಮತ್ತು ಕಪ್ಪು ಕೊಳೆತ (ಬ್ಲಾಕ್ ರಾಟ್) ಮತ್ತು ಕಾಂಡ ಕೊಳೆತ (ಸ್ಟಾಕ್ ರಾಟ್) ದಿಂದ ಉಂಟಾಗುವ ನಷ್ಟವನ್ನು ತಡೆಯಲು ಬೆಳೆಗಾರರು ಮುಂದಾಗಬೇಕಿದೆ ಎಂದು ಚಿಕ್ಕಮಗಳೂರು ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. 

ಅನುಸರಿಸಬೇಕಾದ ಕ್ರಮಗಳು
ಹೆಚ್ಚುವರಿ ನೀರಿನ ಹರಿವು ಹೋಗಲು ಅನುಕೂಲವಾಗುವಂತೆ ಒಳಚರಂಡಿಯನ್ನು ಮತ್ತು ತೊಟ್ಟಿಲು ಹೊಂಡಗಳನ್ನು ಸ್ವಚ್ಛಗೊಳಿಸಬೇಕು, ಬೇರುಗಳಲ್ಲಿ ಸರಾಗವಾಗಿ ಗಾಳಿಯಾಡಲು ಸಹಾಯಕವಾಗುವಂತೆ ಪ್ರತಿ ನಾಲ್ಕು ಕಾಫಿ ಗಿಡಗಳ ಮಧ್ಯದಲ್ಲಿ ಗಿಡದ ಕಸಕಡ್ಡಿಗಳನ್ನು ರಾಶಿ ಹಾಕಬೇಕು, ಬೇರಿನ ಭಾಗದ ಸುತ್ತ ಪ್ರತಿ ಎಕರೆಗೆ ಒಂದು ಚೀಲದಂತೆ ಯೂರಿಯಾವನ್ನು ಬಳಸಬೇಕು. ಇದು ಬೇರಿನ ಮೂಲ ಚಟುವಟಿಕೆಯನ್ನು ಪ್ರಚೋದಿಸುತ್ತದೆ, ಎಲ್ಲಿಯಾದರೂ ಹಿಂಗಾರು ಸಿಂಪಡಣೆ ಪೂರ್ಣಗೊಂಡಿಲ್ಲವಾದ್ದಲ್ಲಿ ಶೇಕಡಾ 1 ರಷ್ಟು ಬೊರ್ಡೊ ದ್ರಾವಣವನ್ನು 1 ಕೆ.ಜಿ ಯೂರಿಯಾ + 750 ಗ್ರಾಂ ಮ್ಯುರೀಯೇಟಾ ಆಫ್ ಪೋಟಾಷ್ (ಎಂ.ಒ.ಪಿ) + 500 ಗ್ರಾಂ ಸತುವಿನ ಸಲ್ಫೇಟ್ + 75 ಮಿಲಿ ಪ್ಲಾನೋಪಿಕ್ಸ್ ಜೊತೆಗೆ ಒಂದು ಬ್ಯಾರೆಲ್ ಮಿಶ್ರಣಗೊಳಿಸಿ ಸಿಂಪರಣೆ ಮಾಡಬೇಕು ಎಂದು ಚಿಕ್ಕಮಗಳೂರು ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News