ದಕ್ಷಿಣ ಕೊಡಗಿನಲ್ಲಿ ಮುಂದುವರೆದ ಹುಲಿ ದಾಳಿ: ಸಾಲು ಸಾಲು ಜಾನುವಾರುಗಳ ಸಾವು
ಮಡಿಕೇರಿ, ಜೂ.21: ದಕ್ಷಿಣ ಕೊಡಗಿನಲ್ಲಿ ಹುಲಿದಾಳಿ ಮುಂದುವರೆದಿದ್ದು, ಸಾಲು ಸಾಲು ಜಾನುವಾರುಗಳು ಬಲಿಯಾಗುತ್ತಿವೆ. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಹಸುಗಳನ್ನೇ ಹುಲಿ ಎಳೆದೊಯ್ದು ಭಕ್ಷಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಆತಂಕ ಮನೆ ಮಾಡಿದೆ.
ಶ್ರೀಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀರುಗ ಗ್ರಾಮದ ನಿವಾಸಿ ಅಜ್ಜಮಾಡ ವಿಜು ಕಾರ್ಯಪ್ಪ ಅವರ ಎರಡು ಹಸುಗಳನ್ನು ಕೊಟ್ಟಿಗೆಯಿಂದ ಎಳೆದೊಯ್ದು ತಿಂದು ಹಾಕಿದೆ. ಮುಂಜಾನೆ ಮನೆ ಮಾಲೀಕರು ಗಮನಿಸಿದಾಗ ಕೊಟ್ಟಿಗೆಯ ಬಾಗಿಲಿನಲ್ಲಿಯೇ ಹಸುವಿನ ಅರ್ಧ ಮೃತದೇಹ ಸತ್ತು ಬಿದ್ದಿರುವುದು ಕಂಡು ಬಂದಿದೆ. ಗದ್ದೆಯ ಬಯಲಿನ ತೋಡಿನ ಸಮೀಪ ಮತ್ತೊಂದು ಹಸುವಿನ ದೇಹ ಗೋಚರಿಸಿದೆ.
ಹೈನುಗಾರಿಕೆಯಲ್ಲಿ ತೊಡಗಿರುವ ವಿಜು ತನ್ನ ಕೊಟ್ಟಿಗೆಯಲ್ಲಿ 30ಕ್ಕೂ ಅಧಿಕ ಹಸುಗಳನ್ನು ಸಾಕಾಣೆ ಮಾಡುತ್ತಿದ್ದಾರೆ. ಬ್ರಹ್ಮಗಿರಿ ಮೀಸಲು ಅರಣ್ಯ ಪ್ರದೇಶದಿಂದ ಹುಲಿ ದಾಳಿಯಾಗುತ್ತಿರುವ ಬಗ್ಗೆ ಗ್ರಾಮಸ್ಥರಲ್ಲಿ ಶಂಕೆ ವ್ಯಕ್ತವಾಗಿದೆ.
ನೆಮ್ಮಲೆ ಗ್ರಾಮದ ನಿವಾಸಿ ರವಿ ಎಂಬುವವರಿಗೆ ಸೇರಿದ ಹಸುವೊಂದು ಹುಲಿದಾಳಿಗೆ ಬಲಿಯಾಗಿದ್ದು, ಇಲ್ಲಿಯವರೆಗೆ ಶ್ರೀಮಂಗಲ, ಬೀರುಗ ವ್ಯಾಪ್ತಿಯಲ್ಲಿ ಸುಮಾರು 20 ಕ್ಕೂ ಅಧಿಕ ಜಾನುವಾರುಗಳನ್ನು ಹುಲಿ ಬಲಿ ತೆಗೆದುಕೊಂಡಿದೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ವನ್ಯಜೀವಿಗಳ ದಾಳಿ ಹೆಚ್ಚಾಗಿದೆ ಎಂದು ಆರೋಪಿಸಿರುವ ಸ್ಥಳೀಯ ಗ್ರಾಮಸ್ಥರು ಹುಲಿ ಸೆರೆಗೆ ಆಗ್ರಹಿಸಿದ್ದಾರೆ.