ಸ್ವಾಸ್ಥ್ಯ ಜೀವನಕ್ಕೆ ಯೋಗ ಸಹಾಯಕ: ಶಾಸಕ ಕೆ.ಎಸ್.ಈಶ್ವರಪ್ಪ

Update: 2018-06-21 17:00 GMT

ಶಿವಮೊಗ್ಗ, ಜೂ. 21: ಶರೀರ-ಆತ್ಮ, ಮನಸ್ಸು-ಬುದ್ದಿ ಹಾಗೂ ಸರಿಯಾದ ಉಸಿರಾಟದ ಪ್ರಯೋಗ ಮಾಡಿ ಸ್ವಾಸ್ಥ್ಯ ಜೀವನ ಹೊಂದಲು ಯೋಗ ಸಹಕಾರಿಯಾಗಿದೆ ಎಂದು ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಮಹಾನಗರಪಾಲಿಕೆ ಹಾಗೂ ಸ್ಥಳೀಯ ಯೋಗ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯೋಗ ದೇಶದ ನಾಗರಿಕರಲ್ಲಿ ಸಹೋದರತ್ವ ಮೂಡಿಸಿ ಸಹಬಾಳ್ವೆಯಿಂದ ಒಂದಾಗಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.

ಯೋಗ ದಿನದ ಪ್ರತಿಕ್ಷಣವೂ ಅಮೂಲ್ಯ. ಈ ಅಪರೂಪದ ಕಾರ್ಯಕ್ರಮದಲ್ಲಿ ಪ್ರಧಾನಿ ಸೇರಿದಂತೆ ದೇಶದ ಅನೇಕ ಗಣ್ಯರು ಭಾಗಿಯಾಗುತ್ತಿದ್ದಾರೆ. ವಿಶೇಷವೆಂದರೆ ಡೆಹ್ರಾಡೂನ್‍ನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ 55,000ಕ್ಕೂ ಹೆಚ್ಚಿನ ಜನ ಏಕಕಾಲದಲ್ಲಿ ಯೋಗ ಮಾಡಿ ದಾಖಲೆ ಬರೆಯುತ್ತಿರುವುದು ಹರ್ಷದ ಸಂಗತಿ ಎಂದ ಅವರು, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಹಲವು ಧರ್ಮಗಳ ಪ್ರತಿನಿಧಿಗಳು ಭಾಗಿಯಾಗಿ, ಬ್ರಾತೃತ್ವದ ಮನೋಭಾವನೆಯಿಂದ ಭಾಗಿಗಳಾಗುತ್ತಿರುವುದು ಭಾರತೀಯರೆಲ್ಲರಲ್ಲೂ ಸಂತಸ ತಂದಿದೆ. ಈ ಹರ್ಷಕ್ಕೆ ನಮ್ಮ ದೇಶ ಬಾಜನವಾಗಿರುವುದು ಮತ್ತಷ್ಟು ಸಂಭ್ರಮ ತಂದಿದೆ ಎಂದರು.

ಅಸಂಖ್ಯಾತ ಜನರು ಯೋಗ ಕಲಿತು ದುಶ್ಚಟಗಳಿಂದ ದೂರವಾಗಿ, ತಮ್ಮ ಜೀವನ ಶೈಲಿ ಬದಲಾಯಿಸಿಕೊಂಡಿದ್ದಾರೆ. ಇದರಿಂದಾಗಿ ಭಾರತದ ವೈಶಿಷ್ಟ್ಯ ವಿಶ್ವಕ್ಕೆ ಪರಿಚಯವಾಗಿದೆ ಎಂದ ಅವರು, ಶಾಂತಿ ನೆಮ್ಮದಿ ತರುವ ಯೋಗ ಜನರಲ್ಲಿ ಶಾರೀರಿಕ ಮತ್ತು ಮಾನಸಿಕ ನೆಮ್ಮದಿ ತರಲು ಪ್ರೇರಕ ಶಕ್ತಿಯಾಗಿದೆ ಎಂದವರು ನುಡಿದರು.

ಯೋಗದಿಂದ ಮನಸ್ಸು-ದೇಹದ ಆಲಸ್ಯ ದೂರವಾಗುವುದು. ಯೋಗದಿಂದ ರೋಗದ ಭಯವಿಲ್ಲ. ಯಾವುದೇ ಅಡ್ಡಪರಿಣಾಮಗಳಿಲ್ಲದೇ ರೋಗಗಳನ್ನು ದೂರ ಮಾಡುವ, ದೇಹಕ್ಕೆ ನವಚೈತನ್ಯವನ್ನು ನೀಡುವ ಶಕ್ತಿ ಮತ್ತು ಪ್ರಭಾವಶಾಲಿ ಸಹಜ ಚಿಕಿತ್ಸೆ ಎಂದರೆ ಯೋಗ ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ ಅವರು ಮಾತನಾಡಿ, ವರ್ತಮಾನದ ಆಧುನಿಕ ಜೀವನಶೈಲಿ, ಆಧುನಿಕ ಆಹಾರ ಪದಾರ್ಥಗಳು, ಆಕರ್ಷಕ ಜಾಹಿರಾತುಗಳು ಮಾನವನಲ್ಲಿ ಮನೋವಿಕಾರಗಳನ್ನು ಸೃಷ್ಠಿಮಾಡಿ ಅಶಾಂತರು ಅನಾರೋಗ್ಯವಂತರನ್ನಾಗಿಸಿ ಪ್ರತಿಕ್ಷಣ ಒತ್ತಡ, ಭಯ, ಆತಂಕ, ನಿರಾಸೆಯಲ್ಲಿ ಬದುಕುವಂತೆ ಮಾಡಿದೆ. ಈ ಎಲ್ಲಾ ಅಡ್ಡಿ-ಆತಂಕಗಳ ನಿವಾರಣೆಗೆ ಯೋಗ ದಿವ್ಯೌಷಧವೆನಿಸಿದೆ ಎಂದರು.

ಯೋಗದಿಂದ ಮಾನವ ಸಹಜವಾದ ಸ್ನೇಹ, ಪ್ರೀತಿ, ಶಾಂತಿ, ನಿಸ್ವಾರ್ಥ ಸೇವಾ ಮನೋಭಾವ, ವಿಶ್ವಬ್ರಾತೃತ್ವದ ಶ್ರೇಷ್ಠಭಾವನೆ ಬೆಳೆದು ಬರುತ್ತದೆ. ಸುಖ-ಶಾಂತಿ-ಸಮೃದ್ಧಿ ಹಾಗೂ ಆರೋಗ್ಯವಂತ ವ್ಯಕ್ತಿ, ಸಮಾಜ ಮತ್ತು ವಿಶ್ವದ ನಿರ್ಮಾಣಕ್ಕೆ ಯೋಗಶಕ್ತಿ ಭದ್ರಬುನಾದಿಯಾಗಲಿದೆ. ದೇಹದ ಆಂತರಿಕ ಭಾಗಗಳನ್ನು ಯೋಗದಿಂದ ನಿಯಂತ್ರಿಸಬಹುದಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಂತರ ಸಾರ್ವಜನಿಕರಲ್ಲಿ ಯೋಗದ ಅರಿವು ಮೂಡಿಸಲು ಯೋಗಜಾಥಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಜಾಥಾದಲ್ಲಿ ಆಯುರ್ವೇದ ವೈದ್ಯರು, ಸಿಬ್ಬಂಧಿಗಳು, ವಿವಿಧ ಆಯುರ್ವೇದ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಯೋಗ ಸಂಘ-ಸಂಸ್ಥೆಗಳ ಯೋಗಪಟುಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿ.ಪಂ.ಉಪಕಾರ್ಯದರ್ಶಿ ಎ.ಎಸ್.ಮಣಿ, ಡಾ.ರಂಗಸ್ವಾಮಿ, ಉದ್ಯಮಿ ಡಿ.ಎಸ್.ಅರುಣ್, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಆಯುಷ್ ಅಧಿಕಾರಿ ಡಾ.ಹರ್ಷಪುತ್ರಾಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News