ಸ್ವಸ್ಥ ಮನಸ್ಸು, ಸದೃಢ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಯೋಗ ಅವಶ್ಯ: ಸಂಸದ ಜಿ.ಎಂ ಸಿದ್ದೇಶ್ವರ್

Update: 2018-06-21 17:26 GMT

ದಾವಣಗೆರೆ,ಜೂ.21: ಸ್ವಸ್ಥ ಮನಸ್ಸು ಮತ್ತು ಸದೃಢ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಯೋಗ ಅವಶ್ಯ. ವಿಶ್ವಕ್ಕೆ ಯೋಗ ತೋರಿಸಿಕೊಟ್ಟವರು ಭಾರತದ ಪ್ರಧಾನಿ ಮೋದಿಯವರು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ, ತಪೋವನ ಹಾಗೂ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಪತಂಜಲಿ ಯೋಗ ಸಂಸ್ಥೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಸೇವಾದಳ, ಎಎಫ್‍ಐ&ಎನ್‍ಐಎಂಎ, ಎನ್‍ಸಿಸಿ, ಎನ್‍ಎಸ್‍ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಇಲಾಖೆಗಳ ಸಹಯೋಗದಲ್ಲಿ  ಮೋತಿವೀರಪ್ಪ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯಂತ ಪ್ರಾಚೀನವಾದ ಮತ್ತು ಉಪಯುಕ್ತವಾದ ಯೋಗ ಎಲ್ಲರಿಗೂ ಪರಿಚಯಿಸಬೇಕೆಂಬ ಉದ್ದೇಶದಿಂದ ನಮ್ಮ ಮೋದಿ ವಿಶ್ವ ಯೋಗ ದಿನಾಚರಣೆ ಘೋಷಣೆಗೆ ಕಾರಣಕರ್ತರಾದರು. ಇಂದು ಅನೇಕ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ ಎಂದ ಅವರು, ಹಿಂದೆ ಪೂರ್ವಿಜರು ಅತ್ಯಂತ ಶ್ರಮಜೀವಿಗಳಾಗಿದ್ದು, ಬೆವರು ಸುರಿಸಿ ಕೆಲಸ ಮಾಡುತ್ತಿದ್ದರು. ಆ ಮೂಲಕ ಆರೋಗ್ಯವಂತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಮನುಷ್ಯ ಯಂತ್ರಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಿ, ದೈಹಿಕ ಚಟುವಟಿಕೆ ಇಲ್ಲದೇ ಅನೇಕ ಕಾಯಿಲೆ ಮತ್ತು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇಂತಹ ದಿನಮಾನದ ಸಂದರ್ಭ ಯೋಗಾಭ್ಯಾಸ ದಿನನಿತ್ಯ ಮಾಡುವುದರಿಂದ ಆರೋಗ್ಯವಂತರಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಯೋಗಾಭ್ಯಾಸ ಮಾಡಿ, ಸಧೃಡರಾಗಿರಬೇಕೆಂದು ಆಶಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಆರೋಗ್ಯವಂತರಾಗಿರಲು ಆದಷ್ಟು ಬೇಗ ಎದ್ದು ಯೋಗಾಭ್ಯಾಸ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ವಿಶ್ವದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಹಿಂದಿನ ಜೀವನ ಕ್ರಮಕ್ಕೆ ಹೋಲಿಸಿದರೆ ಇಂದಿನ ಜೀವನ ಕ್ರಮ ತೀರಾ ವಿಭಿನ್ನ ಮಾರ್ಗದಲ್ಲಿ ಹೋಗುತ್ತಿದೆ. ಮನುಷ್ಯನಿಗೆ ಅಗಾಧವಾದ ನಿಯಂತ್ರಣ ಶಕ್ತಿ ಇದೆ. ಬಾಹ್ಯ ಜಗತ್ತಿನಲ್ಲಿ ಏನನ್ನು ಬೇಕಾದರೂ ಮನುಷ್ಯ ನಿಯಂತ್ರಿಸಬಲ್ಲ. ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ಹೊಸಕಿ ಹಾಕುವ ಶಕ್ತಿ ಕೂಡ ಇದೆ. ಆದರೆ ಅಂತರ್ಗತವಾಗಿ, ಆಂತರ್ಯದಲ್ಲಿ ಅಂತಹ ಶಕ್ತಿ ಇಲ್ಲವಾಗಿದೆ ಎಂದರು. 

ವೈದ್ಯಶ್ರೀ ಚನ್ನಬಸವಣ್ಣ ಯೋಗಾಭ್ಯಾಸ ನಡೆಸಿಕೊಟ್ಟರು. ಯೋಗ ಪ್ರಾರ್ಥನೆಯೊಂದಿಗೆ ಶಿಷ್ಟಾಚಾರದಂತೆ ಬೆಳಿಗ್ಗೆ 7 ರಿಂದ  ಯೋಗಾಭ್ಯಾಸ ಆರಂಭವಾಯಿತು. ಮೊದಲಿಗೆ ಚಲನ ಕ್ರಿಯೆ, ಭುಜದ ವ್ಯಾಯಾನ, ನಂತರ 25 ನಿಮಿಷಗಳ ಕಾಲ 19 ಆಸನಗಳು ಹಾಗೂ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ನಂತರ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಳಿಸಲಾಯಿತು. 

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಆಗಮಿಸಿದ್ದ ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ ಮಾತನಾಡಿ, ಜೂ. 21 ವಿಶೇಷ ದಿನವಾಗಿದ್ದು ಅತೀ ದೀರ್ಘ ದಿನ. ಇಂತಹ ದಿನ ಯೋಗ ದಿನಾಚರಣೆ ಆಚರಿಸುತ್ತಿರುವುದು ವಿಶೇಷ. ಕೈಗಾರಿಕೆ ಎಂದರೆ ನಾವೆಲ್ಲರೂ ಜಪಾನ್, ಜರ್ಮನ್‍ನಂತಹ ದೇಶದೆಡೆ ತಿರುಗಿ ನೋಡುತ್ತೇವೆ. ಅದೇ ಯೋಗ ಎಂದರೆ ಎಲ್ಲರೂ ಭಾರತದೆಡೆ ತಿರುಗಿ ನೋಡುತ್ತಾರೆ ಎಂದರು. 

ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಹೇಳಿಕೊಟ್ಟ ವೈದ್ಯಶ್ರೀ ಚನ್ನಬಸವಣ್ಣ ಮಾತನಾಡಿ, ನಮ್ಮ ಒಳಗೆ ನಾವು ಪ್ರವೇಶ ಮಾಡುವುದೇ ಯೋಗ. ಯೋಗ ನೋವಿನಲ್ಲಿರುವವರ ಕಣ್ಣೀರನ್ನು ಒರೆಸುವುದು. ಬೇರೆಯವರ ಮನೆ ದೀಪ ಹಚ್ಚುವುದು. ಎಲ್ಲವನ್ನು ಪೂಜನೀಯವಾಗಿ ನೋಡುವುದೇ ಯೋಗಾಚರಣೆ. ಇಂದು ನಾವೆಲ್ಲಾ ಯೋಗ ಜೀವನ ನಡೆಸುವುದು ಅತ್ಯವಶ್ಯಕ ಎಂದರು.

ಯೋಗಾಭ್ಯಾಸದಲ್ಲಿ ಸಂಸದರು, ಜಿ ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾಧಿಕಾರಿ, ಅಧಿಕಾರಿ, ಯೋಗ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನ ಯೋಗಾಭ್ಯಾಸ ಮಾಡಿದರು. ಶಿಕ್ಷಣ ಮತ್ತು ಸಂಸ್ಕೃತಿ ವಿನಿಯಮ ಕಾರ್ಯಕ್ರಮದಡಿ ಯು ಕೆ(ಯುನೈಟೆಡ್ ಕಿಂಗ್‍ಡಮ್)ಯಿಂದ ಜಿಲ್ಲೆಗೆ ಆಗಮಿಸಿದ್ದ ಎಂಟು ವಿದ್ಯಾರ್ಥಿಗಳು ಇಂದಿನ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು. 

ಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಜಿಪಂ ಅಧ್ಯಕ್ಷೆ ಮಂಜುಳಾ ಟಿವಿ ರಾಜು, ಜಿ ಪಂ ಉಪಾಧ್ಯಕ್ಷೆ ಗೀತಾಗಂಗಾನಾಯ್ಕ, ಜಿಪಂ ಸದಸ್ಯೆ ಶೈಲಜಾ ಬಸವರಾಜ, ಪಾಲಿಕೆ ಸದಸ್ಯೆ ಅಶ್ವಿನಿ ಪ್ರಶಾಂತ್, ಡಿ.ಸಿ. ಉಮಾಪತಿ, ವೈದ್ಯಶ್ರೀ ಚನ್ನಬಸವಣ್ಣ, ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ, ಉಪವಿಭಾಗಾಧಿಕಾರಿಗಳಾದ ಡಾ.ಮಧು ಪಾಟೀಲ್, ಪ್ರಸನ್ನಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಿದ್ದೇಶ್, ಡಾ. ಶಶಿಕುಮಾರ್, ಡಾ.ಗಂಗಾಧರ್ ವರ್ಮ, ಕರ್ನಲ್ ಸಿ.ಎಂ. ಬೋಪಣ್ಣ, ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಲೀಲಕ್ಕ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News