ಕೇಂದ್ರದಿಂದ ರೈಲ್ವೆ ಗೇಟ್‍ ಫ್ಲೈಓವರ್ ನಿರ್ಮಾಣಕ್ಕೆ 36 ಕೋಟಿ ಹಣ ಬಿಡುಗಡೆ: ಸಂಸದ ಸಿದ್ದೇಶ್ವರ

Update: 2018-06-21 17:33 GMT

ದಾವಣಗೆರೆ,ಜೂ.21: ಕೇಂದ್ರ ಸರ್ಕಾರ ಅಶೋಕ ಟಾಕೀಸ್ ಬಳಿಯ ರೈಲ್ವೆ ಗೇಟ್‍ಗೆ ಫ್ಲೈಓವರ್ ನಿರ್ಮಿಸಲು 36 ಕೋಟಿ ಹಣ ಬಿಡುಗಡೆ ಮಾಡಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಶೀಘ್ರ ಕಂಡುಕೊಳ್ಳಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಕಾರಣಗಳಿಂದ ಉದ್ದೇಶಿತ ಯೋಜನೆ ನೆನೆಗುದಿಗೆ ಬಿದ್ದಿದ್ದು, ಇನ್ನು ತಡ ಮಾಡದೇ ಆದಷ್ಟು ಬೇಗನೆ ಅಶೋಕ ಟಾಕೀಸ್ ಬಳಿಯ ರೈಲ್ವೆ ಗೇಟ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುತ್ತೇವೆ ಎಂದ ಅವರು, ರೈಲ್ವೆ ಟ್ರ್ಯಾಕ್ ಮೇಲೆ ಫೈಓವರ್ ನಿರ್ಮಿಸುವುದು ಅಥವಾ ಹಳೆ ಬಸ್ ನಿಲ್ದಾಣ ಅಥವಾ ಗಾಂಧಿ ವೃತ್ತದಿಂದ ಜಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಫೈಓವರ್ ಅಥವಾ ಹಳಿ ಪಕ್ಕದ ಎರಡೂ ಬದಿ ರಸ್ತೆ ಪರ್ಯಾಯ ರಸ್ತೆಗಳಾಗಿ ಅಭಿವೃದ್ಧಿಪಡಿಸುವುದು ಹೀಗೆ ಮೂರೂ ಆಲೋಚನೆ ಬಗ್ಗೆ ಶಾಸಕರು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸ್ಥಳ ಪರಿಶೀಲನೆಗೆ ಚರ್ಚಿಸಲಾಯಿತು ಎಂದರು. 

ಮಹಾ ನಗರ ಪಾಲಿಕೆ, ಪಿಡಬ್ಲ್ಯುಡಿ ಹಾಗೂ ರೈಲ್ವೆ ಇಲಾಖೆ ಸರ್ವೇ ಮಾಡಿ, ಮೂರರಲ್ಲಿ ಯಾವುದು ಸೂಕ್ತವೆಂದು ಇನ್ನೊಂದು ವಾರದಲ್ಲೇ ವರದಿ ನೀಡುವಂತೆ ಸೂಚಿಸಿದ್ದೇನೆ. ಅಧಿಕಾರಿಗಳು ನೀಡುವ ವರದಿ ಆದರಿಸಿ ಕ್ರಮ ಕೈಗೊಳ್ಳುತ್ತೇವೆ. ಛೇಂಬರ್ ಆಫ್ ಕಾಮರ್ಸ್‍ನವರು ಹಿಂದೆ ಫೈಓವರ್‍ಗೆಂದು 23 ಲಕ್ಷ ರೂ. ಕೊಟ್ಟಿದ್ದರು. ಕಾಮಗಾರಿ ಆರಂಭವಾಗಲಿಲ್ಲವೆಂದು, ಹಣವಾಪಾಸ್ ಬಂದಿತ್ತು. ಇದೀಗ 36 ಕೋಟಿ ವೆಚ್ಚದಲ್ಲಿ ಅಶೋಕ ಗೇಟ್ ಬಳಿ ಫೈಓವರ್ ನಿರ್ಮಾಣಕ್ಕಾಗಿಯೇ ಸಭೆ ಕರೆದಿದ್ದೇವೆ ಎಂದರು.

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ದ್ವಿಮುಖ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರ 100 ಕೋಟಿ ಮೀಸಲಿಟ್ಟಿದ್ದರೂ, ರಾಜ್ಯ ಸರ್ಕಾರವೇ ಭೂ ಸ್ವಾಧೀನ ಮಾಡಿಸಿ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಉದ್ದೇಶಿತ ನೇರ ರೈಲ್ವೆ ಮಾರ್ಗಕ್ಕೆ 100 ಕೋಟಿ ಹಣ ಕೇಂದ್ರ ಮೀಸಲಿಟ್ಟಿದ್ದರೂ, ರಾಜ್ಯ ಸರ್ಕಾರವೇ ಭೂ ಸ್ವಾಧೀನ ಮಾಡಿಕೊಡದೇ ನಿರ್ಲಕ್ಷ್ಯ ತೋರುತ್ತಿದೆ ಎಂದರು. 

ಶಾಸಕರಾದ ಎಸ್.ಎ. ರವೀಂದ್ರನಾಥ, ಪ್ರೋ.ಎನ್. ಲಿಂಗಣ್ಣ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ, ಪಿಡಬ್ಲುಡಿ ಇಇ ರಮೇಶ, ಪಾಲಿಕೆ ನೀರು ಸರಬರಾಜು ಇಲಾಖೆ ಅಧೀಕ್ಷಕ ಸತೀಶ್, ಉದಯ ಕುಮಾರ ಇದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News