ಚಾಮರಾಜನಗರ: ಪತಿ, ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಗೃಹಿಣಿ ಪರಾರಿ

Update: 2018-06-21 18:05 GMT

ಚಾಮರಾಜನಗರ,ಜೂ.21: ಮಕ್ಕಳಾಗದಂತೆ ಶಸ್ತ್ರ ಚಿಕಿತ್ಸೆ ನಡೆಸಲು ಬಂದಿದ್ದ ಗೃಹಿಣಿಯೊಬ್ಬಳು ಮೂರು ತಿಂಗಳ ಕಂದಮ್ಮ, ಪತಿ ಮತ್ತು ತಾಯಿಯನ್ನು ತೊರೆದು ಆಸ್ಪತ್ರೆಯಿಂದ ಪರಾರಿಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ ಎನ್ನಲಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕನ್ನೇಗಾಲ ಗ್ರಾಮದ ಜ್ಯೋತಿ ಎಂಬ ಗೃಹಿಣಿ ನಿನ್ನೆ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಆಗಮಿಸಿ ಟ್ಯೂಬಾಕ್ಟಮಿ ಶಸ್ತ್ರ ಚಿಕಿತ್ಸೆಗಾಗಿ ಆಗಮಿಸಿದ್ದು, ರಾತ್ರಿ 9 ಗಂಟೆಯ ನಂತರ ನಿಗೂಢವಾಗಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಪತಿ ಮಹದೇವರವರೊಂದಿಗೆ ಬಂದ ಜ್ಯೋತಿ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸೆ ಕೊಠಡಿಗೆ ತೆರಳಿ, ಮೂತ್ರ ವಿಸರ್ಜನೆಗೆಂದು ಹೊರ ಹೋದವಳು ಪತ್ತೆಯಾಗಿಲ್ಲ, ಮೂರು ತಿಂಗಳ ಕಂದಮ್ಮ ,ಪತಿ, ತಾಯಿ ಮತ್ತು ಮನೆಯಲ್ಲಿ ಹೆಣ್ಣು ಮಗುವನ್ನು ತೊರೆದು ಪರಾರಿಯಾಗಿದ್ದಾಳೆ ಎಂದು ಹೇಳಲಾಗಿದೆ.

ಜ್ಯೋತಿ ಕಳೆದ ನಾಲ್ಕುವರೆ ವರ್ಷಗಳ ಹಿಂದೆ ಮಹದೇವರವರೊಂದಿಗೆ ಮದುವೆಯಾಗಿದ್ದು, ಅಂದಿನಿಂದ ಚೆನ್ನಾಗಿದ್ದ ಕುಟುಂಬದಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಎರಡು ಹೆಣ್ಣು ಮಕ್ಕಳಿದ್ದು, ಮಕ್ಕಳಾಗದ ಹಾಗೆ ಚಿಕಿತ್ಸೆ ಪಡೆಯಲು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದಾಗಿ ಮಹದೇವ ಹೇಳುತ್ತಾರೆ.
ತನ್ನ ಮಕ್ಕಳನ್ನು ಬಿಟ್ಟು, ಎಲ್ಲಿಗೆ ಹೋದಳು ಅಂತ ಗೊತ್ತಾಗಲಿಲ್ಲ, ಇದರಿಂದ ಹಸಗೂಸು ತಾಯಿಗಾಗಿ ಕಾಯುತ್ತಿದೆ ಎಂದು ಆಕೆಯ ತಾಯಿ ರತ್ನಮ್ಮ ಹೇಳಿದ್ದಾರೆ. ನಾಪತ್ತೆಯಾಗಿರುವ ಜ್ಯೋತಿಯ ಪತ್ತೆಗಾಗಿ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News