ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಮೊದಲೇ ಯೋಗ ಮಾಡಿ: ಸಚಿವ ಸಾ.ರಾ.ಮಹೇಶ್

Update: 2018-06-21 18:10 GMT

ಮೈಸೂರು,ಜೂ.21: ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಮೊದಲೇ ಯೋಗ ಮಾಡಿದರೆ ಯಾವುದೇ ರೋಗಗಳು ಬರುವುದಿಲ್ಲ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಅಭಿಪ್ರಾಯಪಟ್ಟರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ಮೈಸೂರು ರೇಸ್ ಕೋರ್ಸ್ ಆವರಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ಜೆಎಸ್‍ಎಸ್ ಸಮೂಹ ಸಂಸ್ಥೆ, ಮೈಸೂರು ಹೋಟೆಲ್ ಮಾಲೀಕರ ಸಂಘ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಮೈಸೂರು ನಗರ ಸಮಸ್ತ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 4ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾಂತ್ರಿಕ ಜೀವನದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಬೇರೆಯವರಿಗೋಸ್ಕರ ಕೆಲಸ ಮಾಡುತ್ತೇವೆ. ನಮಗಾಗಿ ಮಾಡಿಕೊಳ್ಳುವ ಕೆಲಸ ಅಂದರೆ ಯೋಗ ಮಾತ್ರ. ಯೋಗ ಮಾಡಿದರೆ ಯಾವುದೇ ರೋಗಗಳು ಬರುವುದಿಲ್ಲ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂದ ಮೊದಲೇ ಯೋಗ ಮಾಡಿದರೆ ಒಳ್ಳೆಯದು ಎಂದು ಹೇಳಿದರು.

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಯೋಗ ಪಟುಗಳು ಸೇರಬೇಕೆಂದು ಸರ್ಕಾರದ ಸೂಚನೆ ಇತ್ತು. ಆದರೆ ಚುನಾವಣಾ ನೀತಿಸಂಹಿತೆ ಕಾರಣ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಒಟ್ಟಿಗೆ ಸೇರಲು ಸಾಧ್ಯವಾಗದ ಕಾರಣ ಸಾಂಕೇತಿಕವಾಗಿ ಯೋಗ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ಬಾರಿ ವಿಶ್ವಯೋಗ ದಿನಾಚರಣೆ ಆಚರಿಸಿ ಗಿನ್ನಿಸ್ ದಾಖಲೆಗೆ ಕಾರಣರಾಗಿದ್ದ  ಹಿಂದಿನ ಜಿಲ್ಲಾಧಿಕಾರಿ ಡಿ. ರಂದೀಪ್ ಕೂಡ ಪಾಲ್ಗೊಂಡಿದ್ದರು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ನರಸಿಂಹರಾಜ ಒಡೆಯರ್, ಸುತ್ತೂರು ಕಿರಿಯ ಶ್ರೀ ಜಯರಾಜೇಂದ್ರ ಸ್ವಾಮೀಜಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹೀಮಾ ಸುಲ್ತಾನ್ ಪಾಲ್ಗೊಂಡಿದ್ದರು. 

ಸುಮಾರು 60 ಸಾವಿರ ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು.ವಿದೇಶಿಯರೂ ಪಾಲ್ಗೊಂಡು ಗಮನ ಸೆಳೆದರು. ಯೋಗ ದಿನಾಚರಣೆ ಯಶಸ್ವಿಯಾಗಿ ನಡೆದು ರಾಷ್ಟ್ರ ಗೀತೆಯೊಂದಿಗೆ ಯೋಗ ಪ್ರದರ್ಶನ ಮುಕ್ತಾಯಗೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News