×
Ad

ಮಂಡ್ಯ: ಕುಖ್ಯಾತ ಕಳ್ಳನ ಬಂಧನ; 16 ಲಕ್ಷ ರೂ. ಮೌಲ್ಯದ ಆಭರಣ ವಶ

Update: 2018-06-21 23:48 IST

ಮಂಡ್ಯ, ಜೂ.21: ನಗರ ಮತ್ತು ಜಿಲ್ಲಾ ಅಪರಾಧ ದಳ ಜಂಟಿ ಕಾರ್ಯಾಚರಣೆ ನಡೆಸಿ ಕುಖ್ಯಾತ ಅಂತರ್ ಜಿಲ್ಲಾ ಮನೆಗಳ್ಳನನ್ನು ಬಂಧಿಸಿ, ಆತನಿಂದ ಸುಮಾರು 16 ಲಕ್ಷ ರೂ. ಮೌಲ್ಯದ 560 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕು, ಮಾಯಸಂದ್ರ ಹೋಬಳಿ ಆರ್.ಎಸ್.ಪಾಳ್ಯದ ನಿವಾಸಿ ಮುಹಮ್ಮದ್ ಇಬ್ರಾಹಿಂ ಅಲಿಯಾಸ್ ಮುಜ್ಜು ಬಂಧಿತ ಆರೋಪಿ.

ಮಂಡ್ಯದ ಅಜಾದ್ ನಗರದ ಮುಸ್ಲಿಂ ಕಾಲನಿಯಲ್ಲಿ ಕೌಸೀದ್ ಅಹಮದ್ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣ ಸಂಬಂಧ ತನಿಖೆ ಕೈಗೊಂಡಾಗ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ, ವಾಹನ ಮತ್ತು ಮನೆಗಳ್ಳತನ ಸೇರಿದಂತೆ ಆತ 7 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಆರೋಪಿಯು ಮಂಡ್ಯದ ಸೆಂಟ್ರಲ್ ಠಾಣೆ, ಪಶ್ಚಿಮ ಠಾಣೆ, ಕೆರಗೋಡು, ಬಿಂಡಿಗನವಿಲೆ ಠಾಣೆ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಠಾಣೆ ಹಾಗೂ ತುಮಕೂರು ಜಿಲ್ಲೆಯ ನೊಣವಿನಕೆರೆ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ.

ಸದರಿ ಆರೋಪಿಯ ಮೇಲೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ವಾಹನ ಕಳ್ಳತನ ಮತ್ತು ಮನೆಗಳ್ಳತನ ಪ್ರಕರಣಗಳು ಸೇರಿದಂತೆ 33ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾರ ತಿಳಿಸಿದ್ದಾರೆ.

ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ವರಿಷ್ಠಾಧಿಕಾರಿ ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News