×
Ad

ಯೋಗಾಸನ ಕೇವಲ ದಿನಾಚರಣೆಗೆ ಸೀಮಿತವಾಗಬಾರದು: ಶಾಸಕ ಸುರೇಶ್‍ಗೌಡ

Update: 2018-06-21 23:58 IST

ನಾಗಮಂಗಲ, ಜೂ.21: ಯೋಗಾಸನವು ಕೇವಲ ದಿನಾಚರಣೆಗೆ ಸೀಮಿತವಾಗದೆ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನವೂ ಜನರ ಚಟುವಟಿಕೆಯಾಗಬೇಕು ಎಂದು ಶಾಸಕ ಸುರೇಶ್‍ಗೌಡ ಸಲಹೆ ಮಾಡಿದರು.

ತಾಲೂಕು ಆಡಳಿತ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನಾಚರಣೆಯನ್ನು ಯೋಗ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಯೋಗವನ್ನು ಕಷ್ಟಪಟ್ಟು ಮಾಡಬೇಕಿಲ್ಲ. ಕುಳಿತು, ನಿಂತು, ಮಲಗಿಕೊಂಡು ಸಹ ವಿವಿಧ ಪ್ರಕಾರಗಳಲ್ಲಿ ಮಾಡಬಹುದಾಗಿದೆ. ದೇಹವನ್ನು ಸುಲಭ ಮಾರ್ಗದಲ್ಲಿ ದಂಡಿಸಲು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಪ್ರತಿಯೊಬ್ಬರಿಗೂ ಸಹಕಾರಿಯಾಗಲಿದೆ. ಆದ್ದರಿಂದ ಯೋಗವನ್ನು ಕೇವಲ ದಿನಾಚರಣೆಗೆ ಮಾತ್ರ ಸೀಮಿತವಾಗದೆ ಈ ದಿನದ ನಿಮ್ಮ ತಾಲೀಮು ಪ್ರತಿ ದಿನದ ಚಟುವಟಿಕೆಯನ್ನಾಗಿ ಮಾಡಿಕೊಳ್ಳಬೇಕು ಎಂದು ಶಾಸಕರು ಜನತೆಗೆ ಕರೆಕೊಟ್ಟರು.

ನಂತರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿರವರು ಯೋಗಾ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಶಿಬಿರದ ಸ್ಥಳದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿಬಿರದಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರು ಸೇರಿದಂತೆ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಯೋಗಾಬ್ಯಾಸ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ವಿಜಯಕುಮಾರ್, ಸದಸ್ಯ ನೂರ್‍ಮಹ್ಮದ್, ತಹಶೀಲ್ದಾರ್ ನಂಜುಂಡಯ್ಯ, ದೈಹಿಕ ಪರಿವೀಕ್ಷಕ ಶಿವಣ್ಣಗೌಡ, ಬಾಸ್ಕರ್ ಭಟ್ ಇತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News