×
Ad

ಮಾನವ ಮಲ ಹೊರುವ ಕುಟುಂಬಗಳ ಸಮೀಕ್ಷೆ: ಧಾರವಾಡ ಜಿ.ಪಂ.ಸಿಇಓ ಸ್ನೇಹಲ್

Update: 2018-06-22 17:54 IST

ಧಾರವಾಡ, ಜೂ.22: ಧಾರವಾಡ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಮಾನವ ಮಲ ಹೊರುವವರ(ಮ್ಯಾನುವೆಲ್ ಸ್ಕ್ಯಾವೆಂಜರ್) ಸಮೀಕ್ಷೆಯನ್ನು ಸರಿಯಾಗಿ ಮಾಡಬೇಕು, ಯಾವುದೇ ಅರ್ಹ ಕುಟುಂಬ ಅಥವಾ ಫಲಾನುಭವಿ ಕೈಬಿಟ್ಟು ಹೋಗಬಾರದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಸ್ನೇಹಲ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಮೀಕ್ಷೆ ಕುರಿತು ಜರುಗಿದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಂಬಂಧ ಎಲ್ಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತ್ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ನೀತಿ ಆಯೋಗ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಾನವ ಮಲ ಬಾಚುವ ವೃತ್ತಿಯಲ್ಲಿ ತೊಡಗಿರುವ ಮ್ಯಾನುವೆಲ್ ಸ್ಕ್ಯಾವೆಂಜರ್ ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ಜೂ.25 ರಿಂದ ಜು.3 ರವರೆಗೆ ಎಲ್ಲ ತಾಲೂಕು ಪಂಚಾಯತ್ ಕಾರ್ಯಾಲಯಗಳಲ್ಲಿ ನಡೆಸಾಗುತ್ತಿದೆ ಎಂದು ಅವರು ಹೇಳಿದರು.

ಅರ್ಹ ಕುಟುಂಬಗಳು ಸರಕಾರವು ನಿಗದಿಪಡಿಸಿದ ನಮೂನೆಗಳಲ್ಲಿ ಕುಟುಂಬದ ವಿವರಗಳನ್ನು ಭರ್ತಿ ಮಾಡಿಕೊಡಬೇಕು. ಈ ಸಮೀಕ್ಷೆ ಕಾರ್ಯದಲ್ಲಿ ಆಯಾ ಗ್ರಾಮ ಪಂಚಾಯತ್ ಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ಅಧಿಕಾರಿಗಳು, ಸಫಾಯಿ ಕರ್ಮಚಾರಿ ಆಯೋಗದ ಅಧಿಕಾರಿಗಳು ಭಾಗವಹಿಸುತ್ತಾರೆ ಎಂದು ಸ್ನೇಹಲ್ ತಿಳಿಸಿದರು.

ಸಮೀಕ್ಷೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುವುದು. ಮಾನವ ಮಲ ಎತ್ತುವ ಮ್ಯಾನುವೆಲ್ ಸ್ಕ್ಯಾವೆಂಜರ್‌ಗಳನ್ನು ಸಮೀಕ್ಷೆ ಮಾಡಿ ಅರ್ಹ ಕುಟುಂಬಗಳು ಮತ್ತು ಫಲಾನುಭವಿಗಳನ್ನು ಗುರುತಿಸಿ ಸರಕಾರದಿಂದ ವಿಶೇಷ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸವಲತ್ತುಗಳನ್ನು ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಜೂ.25 ರಂದು ಧಾರವಾಡ, 26 ರಂದು ಹುಬ್ಬಳ್ಳಿ, 28 ರಂದು ಕಲಘಟಗಿ, 29 ರಂದು ಕುಂದಗೋಳ ಹಾಗೂ ಜು.3 ರಂದು ನವಲಗುಂದ ತಾಲೂಕು ಪಂಚಾಯತ್ ಕಾರ್ಯಾಲಯಗಳಲ್ಲಿ ಸಮೀಕ್ಷೆ ಕಾರ್ಯ ಜರುಗಲಿದೆ ಎಂದು ಸ್ನೇಹಲ್ ವಿವರಣೆ ನೀಡಿದರು.

ಕಾರ್ಯಾಗಾರದಲ್ಲಿ ಜಿ.ಪಂ.ಉಪಕಾರ್ಯದರ್ಶಿ ಎಸ್.ಜಿ.ಕೊರವರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ ಶಿಂತ್ರೆ, ಸಫಾಯಿ ಕರ್ಮಚಾರಿ ಆಯೋಗದ ಅಧಿಕಾರಿ ಸುಭಾಶ್, ಜಿ.ಪಂ.ಸಹಾಯಕ ಕಾರ್ಯದರ್ಶಿ ಸುರೇಶ ಕುಂದೂರು ಹಾಗೂ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಮತ್ತು ಜಿಲ್ಲೆಯ ಎಲ್ಲ ಐದು ತಾಲೂಕುಗಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News