ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಆದ್ಯತೆ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಬೆಂಗಳೂರು, ಜೂ. 22: ರಾಜ್ಯದಲ್ಲಿ ಶೇ.25ರಷ್ಟು ವಿದ್ಯಾರ್ಥಿಗಳಷ್ಟೇ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಇದರ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಅಲ್ಲದೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಕ್ರಮ ವಹಿಸುವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ತನ್ನ ಕೊಠಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉನ್ನತ ಶಿಕ್ಷಣ ಇಲಾಖೆ ಸದೃಢಗೊಳಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಖಾತೆಯನ್ನು ನನಗೆ ನೀಡಿದ್ದು, ಪ್ರಾಮಾಣಿಕವಾಗಿ, ಅತ್ಯಂತ ಯಶಸ್ವಿಯಾಗಿ ಖಾತೆ ನಿರ್ವಹಿಸಿ, ಗುಣಾತ್ಮಕ ಬದಲಾವಣೆ ತರುವೆ ಎಂದು ಭರವಸೆ ವ್ಯಕ್ತಪಡಿಸಿದರು.
ನಾನೂ 8ನೆ ತರಗತಿ ವ್ಯಾಸಂಗ ಮಾಡಿದ್ದರೂ, ನಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡಿಸಲು ಗಮನ ನೀಡುತ್ತೇನೆಂದ ಅವರು, ಇಲಾಖೆಯಲ್ಲಿ ಹಲವು ಮಾರ್ಪಾಡು ಮಾಡಬೇಕಿದೆ ಎಂದು ಹೇಳಿದರು.
ವಿಶ್ವ ವಿದ್ಯಾಲಯಗಳು ನಗರ ಪ್ರದೇಶಕ್ಕೆ ಸೀಮಿತವಲ್ಲ. ಗ್ರಾಮೀಣ ಪ್ರದೇಶದಲ್ಲೂ ವಿಸ್ತರಿಸಬೇಕು. ಹಳ್ಳಿಯ ಮಕ್ಕಳಿಗೆ ವೃತ್ತಿಪರ ಶಿಕ್ಷಣ ನೀಡಿ ಉದ್ಯೋಗ ಒದಗಿಸಬೇಕು ಎಂದ ಜಿ.ಟಿ.ದೇವೇಗೌಡ, ಇನ್ಫೋಸಿಸ್ ಸಂಸ್ಥೆ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತಹ ವ್ಯವಸ್ಥೆ ಅಗತ್ಯವಿದೆ ಎಂದರು.
ಕಾಂಗ್ರೆಸ್-ಜೆಡಿಎಸ್ತ್ರಿ ಮೈತ್ರಿ ಸರಕಾರದಲ್ಲಿ ಕಂದಾಯ ಮತ್ತು ಜಲಸಂಪನ್ಮೂಲ ಖಾತೆ ಕಾಂಗ್ರೆಸ್‌ಗೆ ಹೋದ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಬಂದ ಖಾತೆಗಳ ಪೈಕಿ ಉನ್ನತ ಶಿಕ್ಷಣ ಖಾತೆಯನ್ನು ಸಿಎಂ ನನಗೆ ನೀಡಿದ್ದಾರೆಂದ ಅವರು, ನಾನು ಗ್ರಾಮೀಣಾಭಿವೃದ್ಧಿ ಖಾತೆ ಬೇಕೆಂದು ಬಯಸಿದ್ದು ನಿಜ ಎಂದು ಸ್ಪಷ್ಟಣೆ ನೀಡಿದರು.