ಧಾರವಾಡ: ಬಂಧಿಗಳಿಗೆ ‘ಬಂಧುವಾದ’ ಉಚಿತ ಕಾನೂನು ನೆರವು ಕೇಂದ್ರ
ಧಾರವಾಡ, ಜೂ.22: ಬಹುತೇಕ ಎಲ್ಲರಿಂದಲೂ ತಿರಸ್ಕೃತರಾದ ಜೈಲುವಾಸಿಗಳಿಗೆ ತಮ್ಮ ಪ್ರಕರಣಕ್ಕೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿಯನ್ನು ನೇರವಾಗಿ ಪಡೆಯುವ, ನ್ಯಾಯಾಲಯಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವ ಹಾಗೂ ತಮ್ಮ ಪ್ರಕರಣ ಕುರಿತು ಹೆಚ್ಚಿನ ಮಾರ್ಗದರ್ಶನ ಪಡೆಯುವ ಸೌಲಭ್ಯಗಳನ್ನು ಹೊಂದಿರುವ ಉಚಿತ ಕಾನೂನು ನೆರವು ಕೇಂದ್ರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೇಂದ್ರ ಕಾರಾಗೃಹದಲ್ಲಿ ಆರಂಭಿಸಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಸರಕಾರವು ಕೇಂದ್ರ ಗೃಹ ಇಲಾಖೆ ಮೂಲಕ ರಾಜ್ಯದ ಎಲ್ಲ ಕಾರಾಗೃಹದಲ್ಲಿ ಬಂಧಿಯಾಗಿರುವ ಮತ್ತು ವಿಚಾರಣೆಯನ್ನು ಎದುರಿಸುತ್ತಿರುವ ಖೈದಿಗಳ ನೆರವಿಗಾಗಿ ಕಾನೂನು ನೆರವು ಕೇಂದ್ರ ಆರಂಭಿಸಲು ಆದೇಶ ಜಾರಿಗೊಳಿಸಿತ್ತು. ಅದರಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಕಾನೂನು ನೆರವು ಕೇಂದ್ರವನ್ನು ಆರಂಭಿಸಿದೆ. ಇದರಿಂದ ಪ್ರತಿ ಖೈದಿಗೂ ತನ್ನ ಪ್ರಕರಣದ ಕುರಿತು ಮಾಹಿತಿ, ನೆರವು ಸಿಗಲಿದೆ. ಇದರಿಂದಾಗಿ ಸಮಯ, ಹಣ, ಮಾನವ ಸಂಪನ್ಮೂಲದ ಉಳಿತಾಯದೊಂದಿಗೆ ಖೈದಿಗಳಿಗೆ ಅನುಕೂಲವಾಗಲಿದೆ ಎಂದು ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕಿ ಡಾ. ಅನಿತಾ ಆರ್. ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ನೆರವು ಕೇಂದ್ರಕ್ಕೆ ಚಾಲನೆ ನೀಡಿದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹೊಸಮನಿ ಸಿದ್ದಪ್ಪಮಾತನಾಡಿ, ಖೈದಿಗಳಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಅವರಿಗೆ ಅಗತ್ಯ ನೆರವು ನೀಡಲು ಈ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
ಅಪರಾಧಿಗೂ ಅಗತ್ಯ ಸಂದರ್ಭದಲ್ಲಿ ಕಾನೂನು ಸಹಾಯ ಪಡೆಯುವ ಹಾಗೂ ವ್ಯಕ್ತಿ ಸ್ವಾತಂತ್ರ್ಯ ಅನುಭವಿಸುವ ಹಕ್ಕು ಇದೆ. ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಈ ಕೇಂದ್ರವು ರಾಜ್ಯದ ಇತರ ಕಾನೂನು ನೆರವು ಕೇಂದ್ರಗಳಿಗೆ ಮಾದರಿಯಾಗುವಂತೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಿಣ್ಣನ್ನವರ ಆರ್.ಎಸ್. ಮಾತನಾಡಿ, ಕಾನೂನು ನೆರವು ಕಾರ್ಯವನ್ನು ಪ್ರಾಧಿಕಾರದಿಂದ ಸಮಾಜದ ಎಲ್ಲ ವರ್ಗಗಳಿಗೂ ವಿಸ್ತರಿಸಲಾಗಿದೆ. ಮಹಿಳೆಯರಿಗೆ, ಮಕ್ಕಳಿಗೆ, ಪರಿಶಿಷ್ಟಜಾತಿ, ಜನಾಂಗದವರಿಗೆ ಹೀಗೆ ಎಲ್ಲರಿಗೂ ತಮ್ಮ ಹಕ್ಕು ಮತ್ತು ಕಾನೂನು ನೆವುಗಳನ್ನು ತಿಳಿಸಲಾಗಿದೆ ಎಂದರು.
ಅದರಂತೆ ಜೈಲುವಾಸಿಗಳಿಗೂ ಕಾನೂನು ತಿಳುವಳಿಕೆಯೊಂದಿಗೆ ಅವರಿಗೆ ಅಗತ್ಯವಿರುವ ಕಾನೂನು ನೆರವು ನೀಡುವ ಉದ್ದೇಶದಿಂದ ಕಾರಾಗೃಹದಲ್ಲಿಯೇ ಕೇಂದ್ರ ತೆರೆಯಲಾಗಿದೆ. ಇಲ್ಲಿ ವಾರದ ನಾಲ್ಕು ದಿನ, ಪ್ರತಿ ದಿನದ ಅರ್ಧದಿನ ಮತ್ತು ಅಗತ್ಯವಿರುವಾಗ ತಕ್ಷಣ ಕಾನೂನು ಸಹಾಯ ನೀಡಲು ಓರ್ವ ಪುರುಷ ಹಾಗೂ ನಾಲ್ಕು ಜನ ಮಹಿಳಾ ನ್ಯಾಯವಾದಿಗಳನ್ನು ನೇಮಿಸಲಾಗಿದೆ ಎಂದು ಅವರು ಹೇಳಿದರು.
ಅವರು ನೆರವು ಅಗತ್ಯವಿರುವ ಖೈದಿಗೆ, ಆಪ್ತ ಸಮಾಲೋಚನೆ ಮಾಡಿ, ಅವರ ಪ್ರಕರಣ ಕುರಿತು ಪೂರ್ಣ ತಿಳುವಳಿಕೆ ಹಾಗೂ ಕೇಂದ್ರದಿಂದ ಸಿಗುವ ಕಾನೂನು ನೆರವಿನ ಬಗ್ಗೆ ತಿಳಿಸಿ ಕೊಡುತ್ತಾರೆ. ಅಗತ್ಯವಿದ್ದಲ್ಲಿ ಕಾರಾಗೃಹದಿಂದಲೇ ನೇರವಾಗಿ ಆನ್‌ಲೈನ್ ಮೂಲಕ ಅಪೀಲ್‌ಗಳನ್ನು ಸಲ್ಲಿಸುತ್ತಾರೆ. ಜಿಲ್ಲಾ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್‌ಗಳಲ್ಲಿರುವ ಕಾನೂನು ನೆರವು ಘಟಕಗಳು ಸಲ್ಲಿಸಿದ ಅಪೀಲ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಖೈದಿಗಳಿಗೆ ನೆರವು ನೀಡಲಿವೆ ಎಂದು ಅವರು ಹೇಳಿದರು.
ಧಾರವಾಡ ಕೇಂದ್ರ ಕಾರಾಗೃಹದಲ್ಲಿ 35 ಜನ ಮಹಿಳಾ ಖೈದಿಗಳು ಹಾಗೂ 610 ಪುರುಷ ಖೈದಿಗಳಿದ್ದಾರೆ. ಇದರಲ್ಲಿ 9 ಜನ ಮಹಿಳೆಯರು ಸೇರಿದಂತೆ 435ಕ್ಕೂ ಹೆಚ್ಚು ಪುರುಷ ಖೈದಿಗಳು ಜೀವಾವಧಿ, ಇತರೆ ಶಿಕ್ಷೆಗೆ ಒಳಪಟ್ಟವರಿದ್ದಾರೆ. ಕಾನೂನು ನೆರವು ಕೇಂದ್ರದಿಂದ ಇವರಿಗೆಲ್ಲ ಅನುಕೂಲವಾಗಲಿದೆ ಎಂದು ಹೊಸಮನಿ ಸಿದ್ದಪ್ಪ ತಿಳಿಸಿದರು.