ತುಮಕೂರು: ಖೋ-ಖೋ ಅಂಕಣದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸಿದ್ಧತೆ; ಕಾಮಗಾರಿ ನಿಲ್ಲಿಸಲು ಸಂಸದರ ಸೂಚನೆ

Update: 2018-06-22 13:24 GMT

ತುಮಕೂರು,ಜೂ.22: ಸ್ಮಾರ್ಟ್ ಸಿಟಿ ಯೋಜನೆಯಡಿ ಸರಕಾರಿ ಜೂನಿಯರ್ ಕಾಲೇಜು ಮೈದಾನ ಅಭಿವೃದ್ದಿ ಪಡಿಸುವ ನೆಪದಲ್ಲಿ ಖೋ-ಖೋ ಮೈದಾನದಲ್ಲಿ ಗಾಂಧಿಭವನ ನಿರ್ಮಾಣಕ್ಕೆ ಮುಂದಾಗಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದರು, ಮುಂದಿನ ತೀರ್ಮಾನದವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಆದೇಶಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಸುಮಾರು 18 ಕೋಟಿ ರೂ ವೆಚ್ಚದಲ್ಲಿ ತುಮಕೂರು ನಗರದ ಹೃದಯ ಭಾಗದಲ್ಲಿರುವ ಸರಕಾರಿ ಜೂನಿಯರ್ ಕಾಲೇಜು ಮೈದಾನವನ್ನು ಅಭಿವೃದ್ದಿ ಪಡಿಸುವ ಯೋಜನೆ ಸಿದ್ದಪಡಿಸಲಾಗಿತ್ತು. ಈ ವೇಳೆ 1932ರಲ್ಲಿ ಸ್ವಾತಂತ್ರ ಹೋರಾಟಕ್ಕೆ ಜನರನ್ನು ಹುರಿದುಂಬಿಸಲು ತುಮಕೂರಿಗೆ ರಾಷ್ಟ್ರಪಿತ ಮಹಾತ್ಮಗಾಂಧಿ ಭೇಟಿ ನೀಡಿ, ವಿಶ್ರಾಂತಿ ಪಡೆದಿದ್ದ ಸ್ಮರಣಾರ್ಥ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಿಸಿ, ಗಾಂಧಿಯವರ ಸಮಗ್ರ ಸಾಹಿತ್ಯವನ್ನು ಪರಿಚಯಿಸುವ ಕೆಲಸಕ್ಕೆ ಕೈ ಹಾಕಿತ್ತು. ಈ ಯೋಜನೆ ರೂಪಗೊಂಡಾಗ ಹೈಸ್ಕೂಲ್ ಮೈದಾನದ ಒಳಗೆ ಇರುವ ಗಾಂಧಿ ಸ್ಮಾರಕ ಭವನದ ಪಕ್ಕದಲ್ಲಿಯೇ ಗಾಂಧಿ ಭವನ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಆದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದ್ದಕ್ಕಿದ್ದಂತೆ ಡಾ.ರಾಧಾಕೃಷ್ಣ ರಸ್ತೆಗೆ ಹೊಂದಿಕೊಂಡಂತೆ ಇರುವ ಖೋ-ಖೋ ಅಂಕಣವೂ ಸೇರಿದಂತೆ 100*100ಅಡಿ ಅಳತೆಯಲ್ಲಿ ನಿರ್ಮಾಣ ಮಾಡಲು ಕಾಮಗಾರಿ ಆರಂಭಿಸಿದಾಗ ಎಚ್ಚೆತ್ತ ಕ್ರೀಡಾಪಟುಗಳು ಗಾಂಧಿಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಕಾಮಗಾರಿ ಮುಂದುವರೆಸದಂತೆ ತಡೆ ಹಿಡಿದಿದ್ದರು. ಜನಪ್ರತಿನಿಧಿಗಳ ಗಮನಕ್ಕೂ ತಂದು, ಆಟದ ಮೈದಾನವನ್ನು ಆಟಗಳಿಗಾಗಿಯೇ ಮೀಸಲಿಡುವಂತೆ ಆಗ್ರಹಿಸಿದ್ದರು.

ಶುಕ್ರವಾರ ಸಂಜೆ ಕ್ರೀಡಾಪಟುಗಳು, ಸ್ವಾವಿ ವಿವೇಕಾನಂದ ಕ್ರೀಡಾ ಕ್ಲಬ್, ರಾಕ್‍ ಯೂತ್ ಕ್ಲಬ್ ಸೇರಿದಂತೆ ಹಲವು ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು, ಪ್ರಮುಖ ಆಟಗಾರರು ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ ಸ್ಥಳಕ್ಕೆ ಅಗಮಿಸಿದ್ದ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಸ್ಥಳ ಪರಿಶೀಲನೆ ನಡೆಸಿ ಸ್ಮಾರ್ಟ್‍ಸಿಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

'ನಿಮಗೆ ಸರಕಾರಿ ಜೂನಿಯರ್ ಕಾಲೇಜು ಅಭಿವೃದ್ದಿ ಮಾಡಿ ಎಂದು ಜವಾಬ್ದಾರಿ ವಹಿಸಲಾಗಿದೆ. ಆದರೆ ಆಟವಾಡುವ ಜಾಗದಲ್ಲಿ ಕಟ್ಟಡ ನಿರ್ಮಿಸಲು ನಿಮಗೆ ಅಧಿಕಾರ ಕೊಟ್ಟವರ್ಯಾರು ಎಂದು ಸ್ಮಾರ್ಟ್‍ಸಿಟಿ ಅಧಿಕಾರಿ ರಮೇಶ್ ಗೆ ಪ್ರಶ್ನಿಸಿದ ಅವರು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ, ತೆಗೆದಿರುವ ಗುಂಡಿಗಳನ್ನು ಮುಚ್ಚುವಂತೆ ಆದೇಶ ನೀಡಿದರು ಎನ್ನಲಾಗಿದೆ.

ನಿಮಗೆ ಗಾಂಧಿ ಭವನ ನಿರ್ಮಾಣ ಮಾಡಲು ಅಗತ್ಯವಿರುವ 100*100 ಜಾಗವನ್ನು ನೀಡಲು ಜಿಲ್ಲಾಡಳಿತ ಸಿದ್ದವಿದೆ. ಅಲ್ಲದೆ ಹಾಲಿ ಗಾಂಧಿ ಸ್ಮಾರಕ ಭವನದ ಬಳಿಯೇ ಸಾಕಷ್ಟು ಜಾಗವಿದೆ. ಅದನ್ನು ಬಿಟ್ಟು ನೂರಾರು ಮಕ್ಕಳು ದಿನವೂ ಅಭ್ಯಾಸ ಮಾಡುವ ಖೋ-ಖೋ ಅಂಕಣದಲ್ಲಿ ಕಟ್ಟಡ ನಿರ್ಮಾಣ ಸರಿಯಲ್ಲ. ಕೂಡಲೇ ಈ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಒಂದು ತೀರ್ಮಾನ ಕೈಗೊಳ್ಳಲಿದ್ದೇವೆ. ಅಲ್ಲಿಯವರೆಗೆ ಕಾಮಗಾರಿ ಸ್ಥಗೀತ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದರು.

ಈ ವೇಳೆ ಕ್ರೀಡಾಪಟುಗಳಾದ ಟಿ.ಆರ್.ವೇಣುಗೋಪಾಲ್, ನರಸಿಂಹರಾಜು, ಹೋಂ ಗಾರ್ಡ್ ಕಮಾಂಡೆಂಟ್ ರವಿಕುಮಾರ್, ಸ್ವಾವಿ ವಿವೇಕಾನಂದ ಕ್ರೀಡಾ ಕ್ಲಬ್, ರಾಕ್ ಯೂತ್ ಕ್ಲಬ್‍ಗಳ ಮುಖ್ಯಸ್ಥರುಗಳು ಹಾಗೂ ಕ್ರೀಡಾಪಟುಗಳು ಜೊತೆಗಿದ್ದರು.
 
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News