ವಾರ್ಡು ಮೀಸಲಾತಿ ಹಂಚಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಳ ಒಪ್ಪಂದ: ಶಾಸಕ ಜ್ಯೋತಿ ಗಣೇಶ್ ಆರೋಪ

Update: 2018-06-22 13:31 GMT

ತುಮಕೂರು,ಜೂ.22: ಮಹಾನಗರ ಪಾಲಿಕೆ ಚುನಾವಣೆಯ ವಾರ್ಡುಗಳ ಮೀಸಲು ಘೋಷಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಳಒಪ್ಪಂದ ಮಾಡಿಕೊಂಡು ಇತರೆ ಪಕ್ಷಗಳಿಗೆ ಹಾಗೂ ಜನಸಾಮಾನ್ಯರಿಗೆ ಅನ್ಯಾಯ ಮಾಡಿದ್ದು, ಇದರ ವಿರುದ್ದ ಕಾನೂನು ರೀತಿ ಅಕ್ಷೇಪಣೆ ಸಲ್ಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಜಿ.ಬಿ ಜ್ಯೋತಿ ಗಣೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಮಹಾನಗರಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಸಮರ್ಪಕ ಮಾನದಂಡ ಅನುಸರಿದೆ, ಜನಸಾಮಾನ್ಯರಿಗೆ ಮೋಸ ಮಾಡಿವೆ. ಚುನಾವಣೆಗೆ ಮುನ್ನವೇ ಒಪ್ಪಂದ ಮಾಡಿಕೊಂಡು, ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಹುನ್ನಾರ ನಡೆಸಿವೆ ಎಂದರು.

ನಗರಪಾಲಿಕೆಯ ವ್ಯಾಪ್ತಿಗೆ ಒಳಪಡುವ 35 ವಾರ್ಡುಗಳಲ್ಲಿ 2011ರ ಜನಗಣತಿಯನ್ನು ಆಧರಿಸಿ, ಯಾವ ವಾರ್ಡುಗಳಲ್ಲಿ ಒಂದು ಸಮುದಾಯಕ್ಕೆ ಸೇರಿದ ಜನರು ಹೆಚ್ಚಿಗೆ ಇದ್ದಲ್ಲಿ ಅಂತಹ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು. ಆದರೆ ಅಧಿಕಾರಿಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರ ಮಾತು ಕೇಳಿ ಮನಸೋ ಇಚ್ಚೆ ಮೀಸಲಾತಿ ವಿಂಗಡಿಸಿದ್ದು, ಇದರಲ್ಲಿ ಭಾರಿ ಅನ್ಯಾಯವಾಗಿದೆ. ನಗರದ ವಾರ್ಡು ಸಂಖ್ಯೆ 10 ರಲ್ಲಿ 2ಎಗೆ ಸೇರಿದ ಜನಸಂಖ್ಯೆ ಶೇ80ಕ್ಕಿಂತಲೂ ಹೆಚ್ಚಿದ್ದರೂ ಸದರಿ ವಾರ್ಡನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಇದೇ ರೀತಿ ಕುರಿಪಾಳ್ಯ, ನಜರಾಬಾದ್ ವಾರ್ಡು ಗಳನ್ನು ಸಾಮಾನ್ಯವರ್ಗಕ್ಕೆ, ಶೇ80ರಷ್ಟು ಇತರೆ ವರ್ಗದವರು ಇರುವ ಚಿಕ್ಕಪೇಟೆ 6ನೇ ವಾರ್ಡನ್ನು 2ಎಗೆ  ಮೀಸಲಿಡ ಲಾಗಿದೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿದ್ದು, ಸರಕಾರ ಕೂಡಲೇ ಸದರಿ ಮೀಸಲಾತಿ ವಿಂಗಡನೆಯನ್ನು ವಾಪಸ್ಸು ಪಡೆದು, 2011ರ ಜನಗಣತಿ ಅನ್ವಯ, ಶೇ50ರ ಮಹಿಳಾ ಮೀಸಲಾತಿಗೆ ಒಳಪಟ್ಟಂತೆ ಎಲ್ಲಾ ಕ್ಯಾಟಗರಿಗಳಿಗೂ ಅನುಕೂಲ ವಾಗುವಂತೆ ಮೀಸಲಾತಿ ಪರಿಷ್ಕರಿಸಬೇಕೆಂದು ಶಾಸಕ ಜ್ಯೋತಿ ಗಣೇಶ್ ಒತ್ತಾಯಿಸಿದರು.

ಸದರಿ ವಾರ್ಡು ಮೀಸಲಾತಿ ಪಟ್ಟಿಗೆ ಅಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶವಿದ್ದು, ಬಿಜೆಪಿ ಕಾನೂನು ಘಟಕ ಈಗಾಗಲೇ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದು, ಮೀಸಲಾತಿ ಪಟ್ಟಿಗೆ ನಿಗಧಿತ ಅವಧಿಯೊಳಗೆ ಅಕ್ಷೇಪಣೆ ಪಟ್ಟಿ ಸಲ್ಲಿಸಲಿದೆ. ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ತಿಳಿಸಿದರು.

ತುಮಕೂರು ನಗರದ ವಾರ್ಡು ವಿಂಗಡನೆಯಲ್ಲಿಯೂ ಸಾಕಷ್ಟು ಅನ್ಯಾಯವಾಗಿದೆ. ಸರಕಾರ ಬಿಡುಗಡೆ ಮಾಡಿರುವ ವಾರ್ಡು ಮ್ಯಾಪ್‍ಗೂ ಮತದಾರರ ಪಟ್ಟಿಗೂ ತಾಳೆಯೆ ಇಲ್ಲದಂತಾಗಿದೆ. ವಿಧಾನಸಭೆ ಚುನಾವಣೆ ವೇಳೆ ವಾರ್ಡು ವಿಂಗಡನೆಯಾದ ಪರಿಣಾಮ ಬಿಜೆಪಿ ಕೆಲಸದ ಒತ್ತಡದಲ್ಲಿ ಸಮರ್ಪಕವಾಗಿ ಅಕ್ಷೇಪಣೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಈಗ ಹಾಗಾಗಲು ಬಿಡುವುದಿಲ್ಲ. ಕಾನೂನು ಪ್ರಕಾರ ಎಲ್ಲಾ ರೀತಿ ಹೋರಾಟವನ್ನು ಬಿಜೆಪಿ ಮಾಡಲಿದೆ ಎಂದರು.

ಕ್ಷೇತ್ರದ ಅಭಿವೃದ್ದಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ಆದರೆ ಒಂದು ಇಲಾಖೆ, ಇನ್ನೊಂದು ಇಲಾಖೆಯ ನಡುವೆ ಸಮನ್ವಯದ ಕೊರತೆ ಇದೆ. ಅಧಿಕಾರಿಗಳ ನಡುವಿನ ಪ್ರತಿಷ್ಠೆಯ ಫಲವಾಗಿ, ಪರಸ್ವರ ಕುಳಿತು ಚರ್ಚ ಮಾಡಿ ಪರಿಹರಿಸಬಹುದಾದ ಬಹುತೇಕ ಸಮಸ್ಯೆಗಳು ಹಾಗೆಯೇ ಉಳಿದಿವೆ. ಸದ್ಯದಲ್ಲಿಯೆ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿ, ಸಮನ್ವಯತೆ ಮೂಡಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕರು ತಿಳಿಸಿದರು.

ತುಮಕೂರು ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಸಂಬಂಧ ಈಗಾಗಲೇ ಜನಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಬಿಜೆಪಿ ಎಲ್ಲಾ ಶಾಸಕರು ಚರ್ಚೆ ನಡೆಸಿ, ಜಿಲ್ಲೆಯ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಾಗಿದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೆಲ ತಾಂತ್ರಿಕ ಅಡಚಣೆಗಳು ನಿವಾರಣೆಯಾದ ತಕ್ಷಣ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಯಲಿದೆ ಎಂದು ಜೋತಿ ಗಣೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿ.ಎನ್.ರಮೇಶ್,ಪ್ರಧಾನ ಕಾರ್ಯದರ್ಶಿ ರವೀಶಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಹೆಬ್ಬಾಕ, ಪಾಲಿಕೆ ಸದಸ್ಯ ಬಿ.ಎಸ್.ನಾಗಣ್ಣ,ಮುಖಂಡರಾದ ಕೊಪ್ಪಲ್ ನಾಗರಾಜು, ವೇದಮೂರ್ತಿ, ಜಗನ್ನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News