ಮೊಬೈಲ್ ಗೆ ಆಸೆಪಟ್ಟು ಹಣ ಕಳೆದುಕೊಂಡ ವ್ಯಕ್ತಿ

Update: 2018-06-22 15:30 GMT

ಮಡಿಕೇರಿ, ಜೂ.22: ಮೊಬೈಲ್ ಆಸೆ ತೋರಿಸಿ ತರಕಾರಿ ಕತ್ತರಿಸುವ ಯಂತ್ರ ನೀಡಿ ವಂಚಿಸಿರುವ ಪ್ರಕರಣವೊಂದು ಸೋಮವಾರಪೇಟೆ ಸಮೀಪದ ಒಡೆಯನಪುರದಲ್ಲಿ ನಡೆದಿದೆ.

ಸ್ಯಾಮ್‍ಸಂಗ್ ಗ್ಯಾಲಕ್ಸಿ ಕಂಪನಿಯಿಂದ ತಮಿಳುನಾಡಿನಿಂದ ಮಾತಾನಾಡುತ್ತಿರುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬ ಜುನೈದ್ ಎಂಬಾತನಿಗೆ ಕರೆ ಮಾಡಿ,  'ನಿಮಗೆ ನಮ್ಮ ಕಂಪನಿಯಿಂದ ಸುಮಾರು 12 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ಬಹುಮಾನವಾಗಿ ಬಂದಿದೆ. ನಿಮ್ಮ ವಿಳಾಸ ನೀಡಿದರೆ ನಾವು ಎರಡು ದಿನದಲ್ಲಿ ಮೊಬೈಲ್ ಕಳುಹಿಸಿಕೊಡುತ್ತೇವೆ ಎಂದು ಕನ್ನಡ ಭಾಷೆಯಲ್ಲೇ ಹೇಳಿದ್ದಾನೆ. ಅದರಂತೆ ಜುನೈದ್ ಎಂಬವರು ತಮ್ಮ ವಿಳಾಸವನ್ನು ನೀಡಿದ್ದು, ಎರಡೇ ದಿನದಲ್ಲಿ ಅಂಚೆ ಮೂಲಕ ದೊಡ್ಡ ಬಾಕ್ಸೊಂದು ಅವರ ವಿಳಾಸಕ್ಕೆ ಬಂದಿದೆ. ಅದನ್ನು ತೆರದು ನೋಡಿ ನಂತರ ಬಿಡಿಸಿಕೊಳ್ಳುತ್ತೇನೆ ಎಂದು ಜುನೈದ್ ಅವರು ಕೋರಿದರಾದರೂ, ಅದಕ್ಕೆ ಅವಕಾಶವಿಲ್ಲ ಎಂದು ಅಂಚೆ ಮಾಸ್ತರರು ತಿಳಿಸಿದ್ದಾರೆ.

ಆದರೆ ಅಂಚೆ ಕಚೇರಿಗೆ 1499ರೂ. ನೀಡಿ ಪಾರ್ಸೆಲ್ ಬಿಡಿಸಿಕೊಂಡು ನೋಡಿದಾಗ ಅದರಲ್ಲಿ ಸ್ಥಳೀಯ ಅಂಗಡಿಗಳಲ್ಲಿ ದೊರೆಯುವ ಕೇವಲ 250 ರಿಂದ 300 ಬೆಲೆಬಾಳುವ ತರಕಾರಿ ಕತ್ತರಿಸುವ ಸಾಧನವಿತ್ತು ಎನ್ನಲಾಗಿದೆ. ಇದರಿಂದ ಕಂಗಾಲಾದ ಜುನೈದ್, ತಮಗೆ ಕರೆ ಬಂದಿದ್ದ ದೂರವಾಣಿ ಸಂಖ್ಯೆ 7538868806ಗೆ ಕರೆ ಮಾಡಿದಾಗ 'ಸಂಖ್ಯೆ ಚಾಲ್ತಿಯಲ್ಲಿ ಇಲ್ಲ' ಎಂಬ ಉತ್ತರ ಬಂದಿದೆ. ಇದರಿಂದಾಗಿ ಅಸಹಾಯಕರಾಗಿರುವ ಜುನೈದ್ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದು, ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರೂ ಇರುತ್ತಾರೆ ಎಂಬುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News