ಶರತ್ ಮಡಿವಾಳ ಹತ್ಯೆ ಪ್ರಕರಣ: ಆರೋಪಿ ಮುಹಮ್ಮದ್ ಷರೀಫ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು

Update: 2018-06-22 14:53 GMT

ಬೆಂಗಳೂರು, ಜೂ.22: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ಮೊದಲನೆ ಆರೋಪಿ ಮುಹಮ್ಮದ್ ಷರೀಫ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಜಾಮೀನು ಮಂಜೂರು ಕೋರಿ ಮುಹಮ್ಮದ್ ಷರೀಫ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ನ್ಯಾಯಪೀಠ, ಎರಡು ಲಕ್ಷ ರೂ.ಮೌಲ್ಯದ ಬಾಂಡ್, ಇಬ್ಬರ ಶ್ಯೂರಿಟಿ ಸೇರಿ ಇನ್ನಿತರೆ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತು.
    
ಶರತ್ ಮಡಿವಾಳ ಹತ್ಯೆ ನಡೆದ ಹತ್ತು ದಿನಗಳ ಬಳಿಕ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಸಮರ್ಪಕ ಸಾಕ್ಷ ಸಂಗ್ರಹಿಸಲು ತನಿಖಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠವು ಆರೋಪಿ ಮುಹಮ್ಮದ್ ಷರೀಫ್‌ಗೆ ಜಾಮೀನು ನೀಡಿ ಆದೇಶಿಸಿತು. ಅರ್ಜಿದಾರ ಮುಹಮ್ಮದ್ ಷರೀಫ್ ಪರವಾಗಿ ವಕೀಲ ಬಿ.ಲತೀಫ್ ಅವರು ವಾದ ಮಂಡಿಸಿದರು.

ಪ್ರಕರಣವೇನು: ಜುಲೈ 4ರಂದು ರಾತ್ರಿ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಳಿ ತನ್ನ ಲಾಂಡ್ರಿ ಅಂಗಡಿಯಲ್ಲಿದ್ದ ವೇಳೆ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಶರತ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಪರಾರಿಯಾಗಿದ್ದರು. ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಶರತ್ ಮಡಿವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಈ ಹತ್ಯೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಶಾಂತಿಯ ವಾತಾವರಣ ನಿರ್ಮಾಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News