ಹಜ್ ಭವನಕ್ಕೆ ‘ಟಿಪ್ಪು ಸುಲ್ತಾನ್’ ಹೆಸರಿಟ್ಟರೆ ಬಿಜೆಪಿಯಿಂದ ಪ್ರತಿಭಟನೆ: ಸಂಸದೆ ಶೋಭಾ ಎಚ್ಚರಿಕೆ

Update: 2018-06-22 16:19 GMT

ಬೆಂಗಳೂರು, ಜೂ. 22: ‘ಹಜ್’ ಭವನಗಳಿಗೆ ಯಾವುದೇ ವ್ಯಕ್ತಿಯ ಹೆಸರಿಟ್ಟಿರುವ ಉದಾಹರಣೆಗಳಿಲ್ಲ. ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವೂ ಆಗಿದೆ. ಹೀಗಾಗಿ ರಾಜ್ಯ ಸರಕಾರ ಟಿಪ್ಪು ಸುಲ್ತಾನ್ ಹೆಸರನ್ನು ಹಜ್ ಭವನಕ್ಕೆ ನಾಮಕರಣ ಮಾಡಿದರೆ ಇದನ್ನು ಬಿಜೆಪಿ ಸಹಿಸುವುದಿಲ್ಲ, ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಸಿದ್ದಾರೆ.

ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪವಿತ್ರ ಹಜ್ ಭವನಕ್ಕೆ ಮತಾಂಧ ಟಿಪ್ಪು ಸುಲ್ತಾನ್ ಹೆಸರನ್ನು ನಾಮಕರಣ ಮಾಡಲಾಗುವುದೆಂಬ ಆಹಾರ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮೈತ್ರಿ ಸರಕಾರ ಮಳೆ-ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸ್ಪಂದಿಸದೆ, ತಮ್ಮ ವೈಯಕ್ತಿಕ ಕೆಲಸದಲ್ಲಿ ಮುಳುಗಿದೆ. ಒಂದು ತಿಂಗಳಿಂದ ಯಾವುದೇ ಚಟುವಟಿಕೆಗಳಿಲ್ಲ, ನೂತನ ಸಚಿವರು ಕಾರ್ಯೋನ್ಮುಖರಾಗಿಲ್ಲ. ಹಿಂದಿನ ಸರಕಾರದ ಹಾದಿಯಲ್ಲೇ ವಿವಾದಗಳ ಮೂಲಕ ಜನರ ಗಮನ ಬೇರೆಡೆಗೆ ಸೆಳೆಯುವ ಷಡ್ಯಂತ್ರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಹಜ್ ಸಚಿವ ಝಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ಮೂಲಕ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ. ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಜಾರಿಗೆ ತಂದು ಸೋತು ಸುಣ್ಣವಾದ ಸಿದ್ದರಾಮಯ್ಯದ ಹಾದಿಯನ್ನೇ ಕುಮಾರಸ್ವಾಮಿ ಸರಕಾರ ಹಿಡಿದಿದೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News