ಎಂಇಪಿ ಅಧ್ಯಕ್ಷೆ ನೌಹೀರಾ ಶೇಖ್‌ರಿಂದ ವಂಚನೆ: ಆರೋಪ

Update: 2018-06-22 16:25 GMT
ನೌಹೀರಾ ಶೇಖ್‌

ಬೆಂಗಳೂರು, ಜೂ.22: ಎಂಇಪಿ ಪಕ್ಷದ ಸಂಸ್ಥಾಪಕಿ ನೌಹೀರಾ ಶೇಖ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ವಂಚಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಪಡೆ ಬಣದ ಅಧ್ಯಕ್ಷ ಕೃಷ್ಣಪ್ಪ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನರಿಗೆ ಮಹಿಳಾ ಎಂಪವರ್‌ಮೆಂಟ್ ಪಕ್ಷ(ಎಂಇಪಿ)ದ ಹೆಸರಿನಲ್ಲಿ ನೌಹೀರಾ ಶೇಖ್ ಮೋಸ ಮಾಡಿದ್ದಾರೆ ಎಂದು ದೂರಿದರು.

ನೌಹೀರಾ ಶೇಖ್ ನಮ್ಮಿಂದ ಹಣ, ಚೆಕ್ ಹಾಗೂ ಬಾಂಡ್‌ಗಳನ್ನು ಪಡೆದುಕೊಂಡು ತಲೆಮರೆಸಿಕೊಂಡಿದ್ದಾರೆ. ನೂರಾರು ಜನರು ಅವರ ಮಾತನ್ನು ನಂಬಿ ಚುನಾವಣೆಗೆ ಸ್ಪರ್ಧಿಸಿ ಹಣ ಕಳೆದುಕೊಂಡಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಬಂಧಿಸಬೇಕೆಂದು ಒತ್ತಾಯಪಡಿಸಿದರು.

ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಹೀನಾ ಕೌಸರ್ ಮಾತನಾಡಿ, ಎಂಇಪಿ ಮುಖಂಡರು ಸಮಾಜದಲ್ಲಿ ಸ್ವಲ್ಪ ಹೆಸರು ಮಾಡಿರುವ ವ್ಯಕ್ತಿಗಳನ್ನು ಅದರಲ್ಲೂ ಮಹಿಳೆಯರನ್ನು ಗುರುತಿಸಿ ಅವರು ಚುನಾವಣೆಗೆ ನಿಲ್ಲುವಂತೆ ಮನವೊಲಿಸಿದರು. ನಂತರ ನೀವು ಪಕ್ಷದ ಪರವಾಗಿ ಪ್ರಚಾರ ನಡೆಸಿ, ಅದಕ್ಕೆ ಅಗತ್ಯವಾದ ಹಣವನ್ನು ಸದ್ಯ ವ್ಯಯ ಮಾಡಿ, ಚುನಾವಣೆ ಮುಗಿದ ನಂತರ ನಾವು ನಿಮ್ಮ ಖಾತೆಗೆ ಹಣ ವರ್ಗಾಯಿಸುತ್ತಿವೆ ಎಂದು ಭರವಸೆ ನೀಡಿದ್ದರು ಎಂದರು.

ಚುನಾವಣೆ ಸ್ಪರ್ಧೆಗಾಗಿ ಬಿ ಫಾರಂ ನೀಡಬೇಕೆಂದರೆ ಅಭ್ಯರ್ಥಿಗಳು ಎರಡು ಮೂರು ಲಕ್ಷ ರೂ, ಖಾಲಿ ಚೆಕ್ ಹಾಗೂ ಬಾಂಡ್‌ಗಳನ್ನು ನೀಡಬೇಕೆಂದು ತಿಳಿಸಿದ್ದರು. ಅನಂತರ ನಾವು ನಿಮ್ಮ ಖಾತೆಗೆ 28 ಲಕ್ಷ ರೂ.ಗಳು ಹಣ ಹಾಕುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಇದೀಗ ನೌಹೀರಾ ಶೇಖ್ ಹೈದರಾಬಾದ್ ಅಥವಾ ದುಬೈನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಸಾಮಾನ್ಯ ಕಾರ್ಯಕರ್ತರಾದ ನಾವು ಅವರನ್ನು ಹೇಗೆ ಸಂಪರ್ಕ ಮಾಡಬೇಕು ಎಂದು ಅರ್ಥವಾಗುತ್ತಿಲ್ಲ. ಕಳೆದ 38 ದಿನಗಳಿಂದ ಶಿವಾಜಿನಗರದಲ್ಲಿರುವ ಎಂಇಪಿ ಪಕ್ಷದ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದೇವೆ. ಇದುವರೆಗೂ ಯಾರೊಬ್ಬರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News