ಮೋದಿಯಂತಹ ಪ್ರಧಾನಿ ಈ ಮೊದಲು ಭಾರತ ದೇಶದೊಳಗೆ ಬಂದಿಲ್ಲ: ಸಾಹಿತಿ ಡಾ. ಎಸ್.ಎಲ್ ಭೈರಪ್ಪ
ಮೈಸೂರು,ಜೂ.22: ಒಂದೇ ಸಮನೆ ದೇಶದ ಹಿತಕ್ಕೋಸ್ಕರ ತಮ್ಮನ್ನು ತಾನು ತೊಡಗಿಸಿಕೊಳ್ಳುವ, ದೇಶದ ಹಿತ ದೃಷ್ಟಿಯಿಂದ ಆಲೋಚನೆ ಮಾಡುವ ಮೋದಿಯಂತಹ ಪ್ರಧಾನಿ ಈ ಮೊದಲು ಭಾರತ ದೇಶದೊಳಗೆ ಬಂದಿಲ್ಲ ಎಂದು ಹಿರಿಯ ಸಾಹಿತಿ ಡಾ. ಎಸ್.ಎಲ್ ಭೈರಪ್ಪ ಅಭಿಪ್ರಾಯಪಟ್ಟರು.
ಕುವೆಂಪುನಗರದಲ್ಲಿನ ಅವರ ನಿವಾಸದಲ್ಲಿಂದು ಕೇಂದ್ರ ಸರ್ಕಾರದ ಸಾಧನ ವಿವರವುಳ್ಳ ಪುಸ್ತಕದ ಪ್ರತಿಯನ್ನು ಅರ್ಪಿಸುವ ಸಂಸದ ಪ್ರತಾಪ್ ಸಿಂಹ ಅವರ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು 1931ರಲ್ಲಿ ಹುಟ್ಟಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನನಗೆ 16 ವರ್ಷ. ಅದಕ್ಕೂ ಮೊದಲು ಹಳ್ಳಿ ಸುತ್ತಿ ರಾಜಕೀಯ ಹೇಗೆ ನಡೆಯುತ್ತಿದೆ ಎಂಬುದನ್ನು ಬಲ್ಲೆ. ಆಗಿನಿಂದಲೇ ದಿನಕ್ಕೆ ನಾಲ್ಕು ದಿನಪತ್ರಿಕೆ ಓದುವ ಅಭ್ಯಾಸ. ಆದರೆ ನರೇಂದ್ರ ಮೋದಿಯಂತಹ ಪ್ರಧಾನಿ ಭಾರತ ದೇಶದೊಳಕ್ಕೆ ಬಂದಿಲ್ಲ. ಅವರಷ್ಟೇ ಬುದ್ಧಿವಂತರಿರಬಹುದು. ಆದರೆ ಆ ರೀತಿ ಕೆಲಸ ಮಾಡುವವರನ್ನು ನಾನು ನೋಡಿಲ್ಲ. ದೇಶದ ಹಿತಕ್ಕೆ ತಮ್ಮನ್ನು ತಾನು ತೊಡಗಿಸಿಕೊಳ್ಳುವಂತಹ, ದೇಶದ ಹಿತದೃಷ್ಟಿಯಿಂದ ಆಲೋಚನೆ ಮಾಡುವಂಥಹವರು ಯಾರೂ ಬಂದಿಲ್ಲ ಎಂದರು.
ಈವಾಗ ನೋಡಿ ಸಮ್ಮಿಶ್ರ ಸರ್ಕಾರ. ಸಿಕ್ಕಿದವರಿಗೆ ಸೀರುಂಡೆ. ಮೋದಿ ಗೆಲ್ಲಿಸದಿದ್ದರೆ ಇದೇ ತರ ಸಮ್ಮಿಶ್ರ ಸರ್ಕಾರ. ಆಗ ದೇಶದ ಗತಿ ಏನಾಗುತ್ತದೆ ಎಂಬುದನ್ನು ಯೋಚನೆ ಮಾಡಲೂ ಸಾಧ್ಯವಿಲ್ಲ. ಆದ್ದರಿಂದ ಮೋದಿಯವರು ಸಾಕಷ್ಟು ಬಹುಮತದಿಂದ ಗೆಲ್ಲಬೇಕು. ಮತ್ತೆ ಕೆಲಸ ಮಾಡಬೇಕು. ಈಗ ಟೇಕಾಫ್ ಆಗಿದ್ದು, ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಮುಂದೆಯೂ ಚೆನ್ನಾಗಿ ನಡೆಯಬೇಕು. 1924, 1929ರಲ್ಲಿಯೂ ಮೋದಿಯೇ ಅಧಿಕಾರಕ್ಕೆ ಬರಬೇಕು ಎಂಬ ಆಶಯ ವ್ಯಕ್ತಪಡಿಸಿದರಲ್ಲದೇ, ಮೋದಿ ಅಧಿಕಾರಕ್ಕೆ ಬರದಿದ್ದರೆ ಅವಿವೇಕದ ಕೆಲಸವಾಗಲಿದೆ. ಜನರು ಎಚ್ಚೆತ್ತುಕೊಳ್ಳಿ, ವಿದ್ಯಾವಂತರು ಹಳ್ಳಿ ಹಳ್ಳಿಗೆ ಹೋಗಿ ಜನರು ಎಚ್ಚೆತ್ತುಕೊಳ್ಳುವ ಕೆಲಸವನ್ನು ಮಾಡಿ ಎಂದು ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗಣ್ಯರಿಗೆ ಮೋದಿ ಸರ್ಕಾರದ ಸಾಧನೆಯನ್ನು ತಿಳಿಸುವ ಪುಸ್ತಕದ ಪ್ರತಿಯನ್ನು ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದು, ಅದರಂತೆ ನಾವೂ ಕೂಡ ಇತ್ತೀಚೆಗೆ ಸುತ್ತೂರು ಶ್ರೀಗಳಿಗೆ ಮತ್ತು ಮೈಸೂರು ರಾಜಮಾತೆಗೆ ಕೇಂದ್ರ ಸರ್ಕಾರದ ಸಾಧನೆ ತಿಳಿಸುವ ಪುಸ್ತಕದ ಪ್ರತಿ ನೀಡಿದ್ದೇವೆ. ಇವತ್ತು ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿಗಳಿಸಿದ ಎಸ್.ಎಲ್.ಭೈರಪ್ಪ ಅವರಿಗೆ ನೀಡಿದ್ದೇವೆ. ಅವರು ಪ್ರಧಾನಿ ಮೋದಿಯವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದರು. ಈ ಸಂದರ್ಭ ಶಾಸಕ ನಾಗೇಂದ್ರ, ನಗರಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್ ಮತ್ತಿತರರಿದ್ದರು.