ಗುಂಡ್ಲುಪೇಟೆ: ಸೆಲ್ಫಿಗೆ ಅವಕಾಶ ಕೊಡದ ರೈತನ ಮೇಲೆ ಹಲ್ಲೆ; ಬೆಂಗಳೂರಿನ ನಾಲ್ವರು ಪೊಲೀಸ್ ವಶಕ್ಕೆ

Update: 2018-06-22 18:07 GMT

ಗುಂಡ್ಲುಪೇಟೆ,ಜೂ.22: ತಾಲೂಕಿನ ಕಣ್ಣೇಗಾಲದ ಬಳಿ ರಾಷ್ಟ್ರೀಯ ಹೆದ್ದಾರಿ 766ಕ್ಕೆ ಹೊಂದಿಕೊಂಡಂತಿರುವ ಜಮೀನಿನಲ್ಲಿ ಮಂಗಳವಾರ ಮಧ್ಯಾಹ್ನ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಅವಕಾಶ ನೀಡಲಿಲ್ಲವೆಂದು ಬೆಂಗಳೂರು ಮೂಲದ ಪ್ರವಾಸಿ ಯುವಕರ ತಂಡ ಜಮೀನು ಮಾಲೀಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಬೆಂಗಳೂರಿನ ಮಾಗಡಿ ಮೂಲದವರಾದ ಮಂಜುನಾಥ್, ನವೀನ್, ಕೆ.ಎಂ.ಮಂಜುನಾಥ್, ಮನೋಜ್ ಮತ್ತು ಮೇಘರಾಜ್ ಆರೋಪಿಗಳು. ಘಟನೆ ಬಗ್ಗೆ ಕಣ್ಣೇಗಾಲದ ಗ್ರಾಮದವರಾದ ರೈತರ ಬಸಪ್ಪ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ: ಮಂಗಳವಾರ ಬೆಂಗಳೂರಿನ ಮಾಗಡಿ ಮೂಲದವರಾದ ಐವರು ಯುವಕರು ಕಾರಿನಲ್ಲಿ ಬಂದು ಸೂರ್ಯಕಾಂತಿ ಬೆಳೆದಿದ್ದ ಜಮೀನಿನ ಬಳಿ ಇಳಿದಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ ಜಮೀನಿನೊಳಗೆ ಹೋಗಿದ್ದಾರೆ. ಈ ಸಂದರ್ಭ ಅಲ್ಲೇ ಇದ್ದ ಜಮೀನು ಮಾಲೀಕ ಬಸಪ್ಪ ಜಮೀನಿನೊಳಗೆ ಹೋದರೆ ಸೂರ್ಯಕಾಂತಿ ಗಿಡ ಹಾಳಾಗುತ್ತವೆ. ಅಂಚಿನಲ್ಲಿ ನಿಂತುಕೊಳ್ಳಿ ಎಂದು ಸೂಚಿಸಿದ್ದಾರೆ. ಮದ್ಯಪಾನ ಮಾಡಿದ್ದರು ಎನ್ನಲಾದ ಯುವಕರು ರೈತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ವಿಷಯ ತಿಳಿದು ಸುತ್ತಲಿನ ಜಮೀನುಗಳಲ್ಲಿದ್ದ ಇತರೆ ರೈತರು ಯುವಕರಿಗೆ ಧರ್ಮದೇಟು ನೀಡಿದ್ದಾರೆ. ನಂತರ ವಿಷಯ ಮುಟ್ಟಿಸಿ ಹೈವೇ ಪೊಲೀಸರಿಗೆ ಯುವಕರನ್ನು ಒಪ್ಪಿಸಿದ್ದಾರೆ. ಘಟನೆ ಸಂಬಂಧ ರೈತ ಬಸಪ್ಪ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News