ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆಯುವೆ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಜೂ. 23: ಕಾವೇರಿ ನೀರು ನಿಯಂತ್ರಣ ಮಂಡಳಿ ರಚನೆಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ರಾಜ್ಯದ ಹಕ್ಕು ಕಿತ್ತುಕೊಳ್ಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆಯುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಜಲ ವಿವಾದಗಳ ನಿರ್ವಹಣೆಗೆ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರು ವಿಷಯದ ಕುರಿತು ಅಧ್ಯಯನ ಮಾಡುತ್ತಿದ್ದು, ಅಡ್ವೊಕೇಟ್ ಜನರಲ್ ಅವರ ಸಭೆ ಕರೆದಿದ್ದು, ಚರ್ಚೆ ಮಾಡಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವರ ಗಮನವನ್ನೂ ಸೆಳೆದಿದ್ದು, ಹದಿನೈದು ದಿನ ಬಿಟ್ಟು ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಲೋಪ ಸರಿಪಡಿಸಲು ಮನವಿ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಬಹಳ ಹಿಂದಿನಿಂದಲೂ ಅನ್ಯಾಯ ಆಗಿದೆ. ಆದರೂ, ನಾವು ಕೋರ್ಟ್ ಆದೇಶಗಳನ್ನು ಗೌರವಿಸಿದ್ದೇವೆ. ಆದರೆ, ಇದು ನಮ್ಮ ದೌರ್ಬಲ್ಯ ಅಲ್ಲ. ಕರ್ನಾಟಕ ಎಂದೂ ಕಾನೂನು ಉಲ್ಲಂಘನೆ ಮಾಡಿಲ್ಲ. ಜಲ ವಿವಾದದಿಂದ ಜನತೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದರು.