ಉತ್ತರ ಕರ್ನಾಟಕದ ಜನತೆಗೆ ‘ಕಿಮ್ಸ್’ನಲ್ಲಿಯೇ ಉತ್ತಮ ಚಿಕಿತ್ಸೆ: ಸಚಿವ ಡಿ.ಕೆ.ಶಿವಕುಮಾರ್

Update: 2018-06-23 13:35 GMT

ಹುಬ್ಬಳ್ಳಿ, ಜೂ.23: ಉತ್ತರ ಕರ್ನಾಟಕ ಜನರಿಗೆ ಕಿಮ್ಸ್ ಆಸ್ಪತ್ರೆಯಲ್ಲೇ ಉತ್ತಮ ವೈದ್ಯಕೀಯ ಚಿಕಿತ್ಸಾ ಸೇವೆ ದೊರೆಕಿಸಿಕೊಡುವ ಜೊತೆಗೆ ಇಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಹೇಳಿದ್ದಾರೆ.

ಶನಿವಾರ ನಗರದ ಕಿಮ್ಸ್ ಆಡಳಿತ ಕಚೇರಿಯಲ್ಲಿ ನಿರ್ದೇಶಕರು, ವೈದ್ಯರೊಂದಿಗೆ ಚರ್ಚಿಸಿದ ಬಳಿಕ, ವಾರ್ಡ್‌ಗಳಿಗೆ ತೆರಳಿ ರೋಗಿಗಳ ಸಮಸ್ಯೆಗಳ ಆಲಿಸಿದರು. ತದನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 'ಕಿಮ್ಸ್ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೆ, ನಮ್ಮದೇ ಉಪಕರಣಗಳಿದ್ದರೂ ಅವುಗಳನ್ನು ಬಂದ್ ಮಾಡಿ, ಖಾಸಗಿ ಪ್ರಯೋಗಾಲಯ, ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಕಳುಹಿಸಲಾಗುತ್ತಿದೆ ಎಂಬ ಆರೋಪದ ಜೊತೆಗೆ ಉಪಕರಣ, ಪೀಠೋಪಕರಣಗಳನ್ನು ಇಲ್ಲಿನ ಸಿಬ್ಬಂದಿಯೇ ಕಳವು ಮಾಡುತ್ತಿದ್ದಾರೆ ಎನ್ನುವ ದೂರುಗಳಿವೆ. ಇದರ ವಿರುದ್ಧ ಸೂಕ್ತ ಕ್ರಮ ಕೆಗೊಳ್ಳಲಾಗುವುದೆಂದು ತಿಳಿಸಿದರು.

ಸಂಸ್ಥೆಯಲ್ಲಿ ಈಗಾಗಲೇ ಇರುವ ಎಲ್ಲ ಉಪಕರಣಗಳ ಪಟ್ಟಿ ಹಾಗೂ ವಿಡಿಯೋಗ್ರಫಿ ಮಾಡುವಂತೆ ಸೂಚನೆ ನೀಡಿದ್ದೇನೆ. ಇಲ್ಲಿ ಚಿಕಿತ್ಸೆ ಇಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ಎಷ್ಟು ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಪ್ರತಿ ತಿಂಗಳೂ ನೀಡುವಂತೆ ತಾಕೀತು ಮಾಡಿದ್ದೇನೆ. ಉಪಕರಣವೊಂದು ದುರಸ್ಥಿ ಕಾರ್ಯದ ಬಗ್ಗೆ ಸಹ ಮಾಹಿತಿ ಪಡೆಯಲಾಗುವುದು. ಇವುಗಳ ಮೇಲೆ ನಿಗಾ ಇಡಲು ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗುವುದೆಂದು ಶಿವಕುಮಾರ್ ಹೇಳಿದರು.

ಪ್ರತಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ಸರಕಾರ ಸುಮಾರು10 ಲಕ್ಷ ರೂ. ವೆಚ್ಚ ಮಾಡುತ್ತಿದೆ. ಹಾಗಿದ್ದ ಮೇಲೆ ಅವರೂ ಈ ಸಮಾಜಕ್ಕೆ ಏನಾದರೂ ನೀಡಲೇಬೇಕು. ಗ್ರಾಮೀಣ ಸೇವೆ ಮಾಡುವುದರಿಂದ ರಾಜ್ಯದ ಜನರಿಗೆ ಅನುಕೂಲವಾಗಲಿದೆ. ದಂಡ ಕಟ್ಟುವ ಆಯ್ಕೆ ನೀಡಿದ್ದು ಸಹ ಸರಿಯಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News