ಗೋನಾಳ ಜಾತಿ ಸಂಘರ್ಷ: ಅಪರಾಧಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

Update: 2018-06-23 14:39 GMT

ಬೆಂಗಳೂರು, ಜೂ. 23: ಬಳ್ಳಾರಿಯ ಕಂಪ್ಲಿಯ ಗೋನಾಳ ಗ್ರಾಮದಲ್ಲಿ ಮೇ 25ರಂದು ಕುರುಬ ಮತ್ತು ಮಾದಿಗ ಸಮುದಾಯದ ನಡುವಿನ ಜಾತಿ ಸಂಘರ್ಷದ ನಿಜವಾದ ಅಪರಾಧಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಿಯುಸಿಎಲ್ ಮತ್ತು ಪಿಡಿಎಫ್ ಸತ್ಯಾಶೋಧನಾ ಸಮಿತಿ ಆಗ್ರಹಿಸಿದೆ.

ಪಿಡಿಎಫ್‌ನ ಪ್ರೊ.ನಗರಗೆರ ರಮೇಶ್ ನೇತೃತ್ವದ ಸಮಿತಿಯಲ್ಲಿ ಎ.ಕೆ.ಮಂಜಪ್ಪ, ನಾಗೇಶ್ ಅರಳಕುಪ್ಪೆ, ಗೌರಿ, ವಿಠಪ್ಪ ಗೋರಂಟ್ಲಿ, ಜಿ.ವೆಂಕಟಪ್ಪ ಸೇರಿ ಇನ್ನಿತರರು ಇದ್ದರು. ದೌರ್ಜನ್ಯದಿಂದ ಗಾಯಗೊಂಡಿರುವ ದೊಡ್ಡ ದೇವಣ್ಣನ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಆಗ್ರಹಿಸಲಾಗಿದೆ.

ಭಯದಿಂದ ಗ್ರಾಮದ ಅಮಾಯಕರಲ್ಲಿನ ಭೀತಿಯನ್ನು ಹೋಗಲಾಡಿಸಿ ಸಾಮಾನ್ಯ ಜೀವನವನ್ನು ನಡೆಸುವ ಸ್ಥಿತಿ ನಿರ್ಮಿಸಬೇಕು. ಕಾನೂನಿನ್ವಯ ಪರಿಶಿಷ್ಟರಿಗೆ ಸಿಗಬೇಕಾದ ಪರಿಹಾರ ದೊರಕಿಸಿಕೊಡಬೇಕು. ದೌರ್ಜನ್ಯಕ್ಕೆ ಒಳಗಾಗಿರುವ ದೊಡ್ಡ ದೇವಣ್ಣ ಕುಟುಂಬಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಗ್ರಾಮದಲ್ಲಿ ಅಹಿತಕರ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಆಡಳಿತ ಯಂತ್ರ ಜಾಗರೂಕತೆ ವಹಿಸಬೇಕು. ಗ್ರಾಮದಲ್ಲಿ ಭಯದ ವಾತಾವಾರಣವನ್ನು ಹೋಗಲಾಡಿಸಬೇಕು. ಪರಿಸ್ಥಿತಿ ಹತೋಟಿಗೆ ತರುವ ನೆಪವನ್ನೊಡ್ಡಿ ಗ್ರಾಮಸ್ಥರ ವಿರುದ್ದ ಪೋಲೀಸರು ಯಾವುದೇ ರೀತಿಯ ಜಿದ್ದಿನ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ಸಮಿತಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News