ವಿಚಾರಣೆ ತಡವಾದರೆ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ಆದೇಶ

Update: 2018-06-23 14:59 GMT

ಬೆಂಗಳೂರು, ಜೂ. 23: ಸುಪ್ರೀಂಕೋರ್ಟ್ ಆದೇಶದ ಪ್ರಕಾರ 12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 6 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ, ಶಿಕ್ಷೆ ವಿಧಿಸಬೇಕು. ಆದರೆ, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ 6 ತಿಂಗಳಾದರೂ ವಿಚಾರಣೆಯನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ 'ಮುಂದಿನ ತಿಂಗಳು ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ನಿರ್ದೇಶಿಸಿದೆ.

ಆರೋಪಿ ಲಕ್ಷ್ಮಣ್(55) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ನಾ ಅವರಿದ್ದ ನ್ಯಾಯಪೀಠ, ಆರೋಪಿಯು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈತನನ್ನು ಕಲಂ 376 ಐಪಿಸಿ ಮತ್ತು 4 ಪೋಕ್ಸೋ(ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಯುವಲ್ ಅಫೆನ್ಸಸ್ ಆಕ್ಟ್) ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.

ಸುಪ್ರೀಂಕೋರ್ಟ್ ಕೂಡ ಪೋಕ್ಸೋ ಕಾಯ್ದೆ 35(1) ಮತ್ತು 35(2) ಪ್ರಕಾರ ವಿಚಾರಣೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕೆಂದು ನಿರ್ದೇಶಿಸಿದೆ. ಆದರೆ, ಸಿಟಿ ಸಿವಿಲ್ ಕೋರ್ಟ್ ಆರು ತಿಂಗಳಾದರೂ ವಿಚಾರಣೆಯನ್ನು ಪೂರ್ಣ ಗೊಳಿಸಿಲ್ಲ. ಹೀಗಾಗಿ, ಮುಂದಿನ ತಿಂಗಳು ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.

ಅರ್ಜಿದಾರ ಲಕ್ಷ್ಮಣ್ ಪರ ವಾದಿಸಿದ ವಕೀಲ ಡಿ.ಮೋಹನ್‌ ಕುಮಾರ್ ಅವರು, ಆರೋಪಿಯು ಒಂದು ವರ್ಷದಿಂದ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾನೆ. ವಿಚಾರಣೆಗಾಗಿ ಆರೋಪಿಯನ್ನು ಒಂದು ಬಾರಿಯೂ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ವಿಚಾರಣೆಯನ್ನೂ ಪೂರ್ಣಗೊಳಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಪ್ರಕರಣವೇನು: ಬೆಂಗಳೂರಿನ ಇಟ್ಟುಮಡುವಿನ ಟಿ.ಜಿ.ಲೇಔಟ್ ನಿವಾಸಿ ಲಕ್ಷ್ಮಣ್(55) ವಾಸಿಸುವ ಮನೆಗೆ ಪಕ್ಕದ ಮನೆಯ ಏಳು ವರ್ಷದ ಬಾಲಕಿ ಅನು(ಹೆಸರು ಬದಲಾಯಿಸಲಾಗಿದೆ) ಹೋಗಿದ್ದಾಳೆ. ಇದೆ ಸಮಯವನ್ನು ದುರುಪಯೋಗಪಡಿಸಿಕೊಂಡ ಆರೋಪಿ ಲಕ್ಷ್ಮಣ್, ಬಾಲಕಿ ಅನು(ಹೆಸರು ಬದಲಾಯಿಸಲಾಗಿದೆ) ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದ್ದು, ಕೆಲಸಕ್ಕೆ ಹೋಗಿದ್ದ ಪೋಷಕರು ಮನೆಗೆ ಬಂದ ಮೇಲೆ ಬಾಲಕಿಯು ಆರೋಪಿ ಲಕ್ಷ್ಮಣ್ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಹೇಳಿದ್ದಾಳೆ. ಹೀಗಾಗಿ, ಪೋಷಕರು ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೋಕ್ಸೋ ಕಾಯ್ದೆ ಎಂದರೇನು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ವಯಸ್ಸು 16 ವರ್ಷಕ್ಕಿಂತ ಕಡಿಮೆ ಇದ್ದರೆ ಪೋಕ್ಸೋ ಅನ್ವಯ. ಮಗುವಿನ ಹಿತರಕ್ಷಣೆ ಕಾಯ್ದೆಯ ಪ್ರಮುಖ ಉದ್ದೇಶ. ಲೈಂಗಿಕ ಕಿರುಕುಳ, ಅಶ್ಲೀಲ ಚಿತ್ರಕ್ಕೆ ಮಕ್ಕಳ ಬಳಕೆ ಸೇರಿ 5 ಅಪರಾಧಗಳ ವಿರುದ್ಧ ಬ್ರಹ್ಮಾಸ್ತ್ರ. ಲೈಂಗಿಕ ಅಪರಾಧ ಎಸಗುವ ಪ್ರಯತ್ನಕೂಡ ಶಿಕ್ಷೆ ವಿಧಿಸುವ ಅವಕಾಶ. ಪೊಲೀಸರಿಗೆ ಮಾಹಿತಿ ಕೊಡದವರ ವಿರುದ್ಧ ಕ್ರಮಕ್ಕೆ ಅವಕಾಶ.

ಪೊಲೀಸರು ಮಗುವಿನ ಹೇಳಿಕೆಯನ್ನು ಮನೆಯಲ್ಲೇ ಪಡೆದುಕೊಳ್ಳಬೇಕು. ಎಫ್‌ಐಆರ್‌ಗೂ ಮುನ್ನ ಮಗುವಿನ ವೈದ್ಯಕೀಯ ಪರೀಕ್ಷೆ ನಡೆಸಬಹುದು. ಮಗುವಿನ ಪೋಷಕರು, ನಂಬುಗೆಯ ವ್ಯಕ್ತಿಯ ಸಮ್ಮುಖದಲ್ಲಿ ಪರೀಕ್ಷೆ ನಡೆಸಬೇಕು. ಪ್ರಕರಣ ದಾಖಲಾದ 24 ಗಂಟೆಯೊಳಗೆ ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ತರಬೇಕು. ಮಗುವನ್ನು ಪೋಷಕರ ವಶದಲ್ಲಿಡಬೇಕೆ, ಸಮಿತಿಯ ವಶದಲ್ಲಿಟ್ಟುಕೊಳ್ಳಬೇಕೆ ಎಂಬುದರ ತೀರ್ಮಾನ. ರಾತ್ರಿ ಹೊತ್ತಿನಲ್ಲಿ ಮಗುವನ್ನು ಠಾಣೆಯಲ್ಲಿಟ್ಟುಕೊಳ್ಳುವಂತಿಲ್ಲ. ವಿಚಾರಣೆಗಾಗಿ ಮಗುವನ್ನು ಮತ್ತೆ ಮತ್ತೆ ಠಾಣೆಗೆ ಕರೆಸುವಂತಿಲ್ಲ. ತಾನು ನಿರಪರಾಧಿ ಎಂದು ಸಾಬೀತುಪಡಿಸುವುದು ಆರೋಪಿಯ ಜವಾಬ್ದಾರಿ. ಮಾಧ್ಯಮಗಳು ಮಗುವಿನ ಚಿತ್ರ ಬಿತ್ತರಿಸಿದರೆ 6 ತಿಂಗಳಿಂದ 1 ವರ್ಷದವರೆಗೆ ಶಿಕ್ಷೆ. ಒಂದು ವರ್ಷದ ಒಳಗೆ ವಿಶೇಷ ನ್ಯಾಯಾಲಯ ವಿಚಾರಣೆ ಮುಗಿಸಬೇಕು. ದುರುದ್ದೇಶದಿಂದ ಸುಳ್ಳು ದೂರು ಕೊಟ್ಟಿರುವುದು ಸಾಬೀತಾದರೆ ದೂರುದಾರರಿಗೂ ಶಿಕ್ಷೆ.

‘ಸುಪ್ರೀಂಕೋರ್ಟ್ ನಿರ್ದೇನದಂತೆ ಪೋಕ್ಸೋ ಕಾಯ್ದೆ 35(1) ಮತ್ತು 35(2) ಪ್ರಕಾರ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳ್ಳಬೇಕು. ಆದರೆ, ನ್ಯಾಯಾಲಯಗಳು ವಿಚಾರಣೆಯನ್ನು ಪೂರ್ಣಗೊಳಿಸಲು ವಿಳಂಭ ಮಾಡುತ್ತಿರುವುದರಿಂದ ಆರೋಪಿಗಳು ಜೈಲಿನಲ್ಲಿಯೇ ಕೊಳೆಯುವಂತಾಗಿದೆ.’
-ಡಿ.ಮೋಹನ್‌ಕುಮಾರ್ ಹೈಕೋರ್ಟ್ ವಕೀಲ

Writer - -ಪ್ರಕಾಶ್ ಅವರಡ್ಡಿ

contributor

Editor - -ಪ್ರಕಾಶ್ ಅವರಡ್ಡಿ

contributor

Similar News