ಒಂದು ತಿಂಗಳುಗಳ ಕಾಲ ಉಭಯ ಸದನಗಳಲ್ಲಿ ಚರ್ಚೆ ನಡೆಯಲಿ: ಕೇಂದ್ರ ಸಚಿವ ಅನಂತ್ ಕುಮಾರ್
ಬೆಂಗಳೂರು, ಜೂ.23: ಕಾವೇರಿ ನೀರು ನಿಯಂತ್ರಣಾ ಮಂಡಳಿ ರಚಿಸುವ ಕುರಿತು ಉಭಯ ಸದನಗಳಲ್ಲಿ ಒಂದು ತಿಂಗಳ ಕಾಲ ಚರ್ಚೆ ನಡೆಸಬೇಕು ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆ ಕರ್ನಾಟಕ ಮೊದಲಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಇಂದಿಗೂ ಅದು ಜಾರಿಗೆ ಬಂದಿಲ್ಲ. ಒಂದು ಯೋಜನೆ ಪ್ರಸ್ತಾಪವಾದಾಗ ಅದನ್ನು ಜಾರಿಗೆ ತರಲು ಎಲ್ಲರ ಮುಂದಿಟ್ಟು, ಅದನ್ನು ಜಾರಿಗೆ ತರಲು ಯಾವ ರೀತಿ ವ್ಯವಸ್ಥೆ ಆಗಬೇಕು ಎಂದು ಚರ್ಚಿಸಲಾಗುತ್ತದೆ. ಹಾಗಾಗಿ ಈ ಕುರಿತು ಉಭಯ ಸದನಗಳಲ್ಲಿ ಚರ್ಚೆ ಅಗತ್ಯ ಎಂದು ತಿಳಿಸಿದರು.
ಮಂಡಳಿ ರಚನೆ ಪ್ರಕ್ರಿಯೆ ಇನ್ನೂ ಕಡತದ ರೂಪದಲ್ಲಿದೆ. ಹಾಗಾಗಿ ಇಡೀ ಪ್ರಕ್ರಿಯೆ ಮುಕ್ತಾಯ ಆಗುವವರೆಗೂ ನಮ್ಮ ಮುಖಂಡರು ರಾಜ್ಯದ ಹಿತ ಕಾಪಾಡಬೇಕು. ರಾಜ್ಯದಿಂದ ಹೋದ ಮಂತ್ರಿಗಳು ಆ ನಿಟ್ಟಿನಲ್ಲಿ ಸಂಪೂರ್ಣ ಸಹಕರಿಸುತ್ತೇವೆ. ನಮ್ಮ ರಾಜ್ಯದಿಂದ ಹೋದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಈ ನಿಟ್ಟಿನಲ್ಲಿ ಚಿಂತಿಸಿ, ಸಹಕರಿಸಬೇಕು.
ನಿರ್ವಹಣಾ ಮಂಡಳಿ ಕರ್ನಾಟಕದ ಪರ ಇರುವಂತೆ ಮಾಡಲು ನಾವು ಸದಾ ಚಿಂತಿಸುತ್ತೇವೆ ಹಾಗೂ ಎಚ್ಚರದಿಂದಿರುತ್ತೇವೆ. ರಾಜ್ಯಕ್ಕೆ ನ್ಯಾಯ ಸಿಗಲು ಪೂರ್ಣ ಪ್ರಯತ್ನ ಮಾಡುತ್ತೇವೆ. ಒಟ್ಟಾರೆ ನಮ್ಮ ನಾಯಕರು, ಸಂಘಟನೆಗಳು, ಜನರು ರಾಜ್ಯದ ನೆಲ, ಜಲ, ಭಾಷೆಯ ಹಿತ ಕಾಪಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಆಗಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಎಲ್ಲೂ ತಿಳಿಸಿಲ್ಲ. ಹಾಗಾಗಿ ಈ ಕುರಿತು ಚರ್ಚೆ ಅತ್ಯಗತ್ಯ. ಒಂದು ತಿಂಗಳ ಚರ್ಚೆ ನಡೆಸಿದರೆ, ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ. ನಂತರ ಮುಂದಿನ ನಿರ್ಧಾರ ಕೈಗೊಳ್ಳಬೇಕು. ಆದುದರಿಂದ ಸಂಬಂಧಪಟ್ಟರು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದರು.
ಕಾವೇರಿ ನೀರು ನಿಯಂತ್ರಣ ಮಂಡಳಿ ಬಗ್ಗೆ ಚರ್ಚಿಸುವವರು ಅಂತರಾಜ್ಯ ನೀರು ವಿವಾದ ಕಾಯ್ದೆ ಓದಿಕೊಳ್ಳಬೇಕು ಎಂದು ಕಿಡಿಕಾರಿದ ಅವರು, ಅದರಲ್ಲಿ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ರಚಿಸುವುದು ಕೇಂದ್ರಕ್ಕೆ ಬಿಟ್ಟು ವಿಚಾರವೆಂದು ಸುಪ್ರೀಂಕೋರ್ಟ್ ತಿಳಿಸಿದೆ ಎಂದು ಸ್ಪಷ್ಟಪಡಿಸಿದರು.