ಮಂಡ್ಯ: ಇಂಡುವಾಳು ಎಚ್. ಹೊನ್ನಯ್ಯ ದತ್ತಿ ಕೃಷಿ ಪ್ರಶಸ್ತಿ ಪ್ರದಾನ, ಉಪನ್ಯಾಸ ಕಾರ್ಯಕ್ರಮ
ಮಂಡ್ಯ, ಜೂ.23: ದೇಶದ ಕೃಷಿ ಕ್ಷೇತ್ರದ ಕಡೆಗಣನೆ ಪರಮಾವಧಿ ತಲುಪಿದ್ದು, ಇದರ ಬಗ್ಗೆ ಸರಕಾರಗಳು ಗಮನ ಹರಿಸುವಂತಹ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಕೃಷಿ ಕ್ಷೇತ್ರ ಬಹಳ ಮುಖ್ಯ ಸವಾಲಾಗಿ ಪರಿಣಮಿಸಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್ ವಿಷಾದಿಸಿದರು.
ನಗರದ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ 2017-18ನೇ ಸಾಲಿನ ಸ್ವಾತಂತ್ರ್ಯ ಹೋರಾಟಗಾರ ಇಂಡುವಾಳು ಎಚ್. ಹೊನ್ನಯ್ಯ ದತ್ತಿ ಕೃಷಿ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಕೃಷಿ ಮತ್ತು ಸವಾಲು ವಿಷಯ ಕುರಿತು ಮಾತನಾಡಿದರು.
ಹಳ್ಳಿಗಳು ವೃದ್ದಾಶ್ರಮಗಳಾಗುತ್ತಿವೆ. ಭೂಮಿಯ ಮೇಲೆ ಬೆವರು ಸುರಿಸಿ, ಸಾರ್ಥಕ ಬದುಕನ್ನು ಕಟ್ಟಿಕೊಳ್ಳಬೇಕಾದ ಯುವಜನತೆ ಸುಖ ಮತ್ತು ನಾಜೂಕಿಗೆ ಮರುಳಾಗಿ ಪಟ್ಟಣಗಳ ಪಾಲಾಗುತ್ತಿದ್ದಾರೆ. ಯುವ ಶಕ್ತಿಯ ಈ ವಲಸೆಯಿಂದಲೂ ನಮ್ಮ ಕೃಷಿ ಭೂಮಿ ಬಂಜೆಯಾಗಲು ಕಾರಣವಾಗಿದೆ ಎಂದು ಅವರು ವಿಶ್ಲೇಷಿಸಿದರು.
ಕೃಷಿ ಎನ್ನುವುದು ಮನುಷ್ಯನಿಗೆ ಮಾತ್ರವಲ್ಲ ಅವನನ್ನು ಅವಲಂಬಿಸಿರುವ ಇತರೆ ಪ್ರಾಣಿ ಸಮುದಾಯಗಳಿಗೂ ಆಹಾರವನ್ನು ಉತ್ಪಾದಿಸುವ ಕ್ಷೇತ್ರವಾಗಿದೆ. ಆಹಾರ ಪದಾರ್ಥಗಳಲ್ಲದೆ, ಮನುಷ್ಯನ ಇತರೆ ಹಲವು ನಿತ್ಯ ಉಪಯೋಗ ವಸ್ತುಗಳು ಕೃಷಿಯಿಂದಲೇ ಉತ್ಪನ್ನವಾಗುತ್ತಿದೆ ಎಂದು ಅವರು ತಿಳಿಸಿದರು.
ಕೃಷಿಯನ್ನು ಒಂದು ಉದ್ಯಮವನ್ನಾಗಿ ಪರಿಗಣಿಸದಿರುವುದು, ಕೃಷಿ ಉತ್ಪನ್ನಗಳ ಬೆಲೆ ನಿಗದಿಯನ್ನು ಬಂಡವಾಳ ಹೂಡಿಕೆಯ ಪ್ರಮಾಣ ಮತ್ತು ಉತ್ಪನ್ನದ ಪ್ರಮಾಣದ ನೆಲೆಗಟ್ಟಿನ ಮೇಲೆ ನಿರ್ಧರಿಸದಿರುವುದು, ವೈಜ್ಞಾನಿಕ ಮತ್ತು ಸುಸ್ಥಿರ ಮಾರುಕಟ್ಟೆಯನ್ನು ರೂಪಿಸದಿರುವುದು ಸಮಸ್ಯೆಯಾಗಿದೆ. ಮನಸ್ಸು ಮಾಡಿದರೆ ಇದನ್ನು ಬಗೆಹರಿಸಲಾಗದ ಸಮಸ್ಯೆಯೇನಲ್ಲ, ಸರಕಾರಗಳು ಇಂತಹ ಸವಾಲುಗಳನ್ನು ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಇಂಡುವಾಳು ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಪುರಸ್ಕೃತರಾದ ದೊಡ್ಡಬಾಣಸವಾಡಿ ಮಾದರಿ ಕೃಷಿಕ ಚನ್ನಿಂಗೇಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಜಿ ಶಾಸಕ ಎಚ್.ಡಿ. ಚೌಡಯ್ಯ, ಎಚ್. ಹೊನ್ನಯ್ಯನವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಶ್ರೀಮಂತಿಕೆಯ ನಡುವೆಯೂ ಸಮಾಜ ಸುಧಾರಣೆಗೆ ಪ್ರಯತ್ನಿಸಿದರು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲೇ ಗ್ರಾಮೀಣ ಜನರನ್ನು ಸಂಘಟಿಸಿ ಇರ್ವಿನ್ ನಾಲಾ ಚಳವಳಿಯನ್ನು ಯಶಸ್ವಿಗೊಳಿಸಿ ರೈತ ಚಳವಳಿಗೆ ಭದ್ರ ತಳಹದಿ ಹಾಕಿದರು. ಹೆಚ್ಚು ವಿದ್ಯಾವಂತರೂ ಅಲ್ಲ, ಪದವೀಧರರೂ ಅಲ್ಲ, ಆದರೂ ಜನರು ಮತ್ತು ರೈತರ ಮಧ್ಯೆ ಹೋರಾಟ ಮಾಡಿಕೊಂಡು ಬಂದಿರುವ ಹೊನ್ನಯ್ಯನವರ ಆದರ್ಶಗಳು ಇವತ್ತಿನ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ನೆನಪು ಮಾಡಿಸುತ್ತಿರುವುದು ಸಾರ್ಥಕವಾದದ್ದು. ಇಂತಹ ವಿಚಾರಗಳನ್ನು ವಿದ್ಯಾರ್ಥಿಗಳೂ ಸಹ ತಿಳಿದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಶಾಸಕ ಎಂ.ಶ್ರೀನಿವಾಸ್, ದತ್ತಿದಾನಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಹೊನ್ನಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ, ಎಂ.ಬಿ.ರಮೇಶ್, ಪ್ರೊ.ಎಂ.ವೈ. ಶಿವರಾಮು, ಎಸ್.ಕೆ. ಮಹೇಶ್, ಕೋಣನಹಳ್ಳಿ ಮಂಜುನಾಥ್, ರಾಜ್ಯ ಸರಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ. ಅಪ್ಪಾಜಪ್ಪ ಇತರರು ಇದ್ದರು.