ಟಿಪ್ಪುಸುಲ್ತಾನ್ ಮುಸಲ್ಮಾನ ಅಲ್ಲ ಎಂಬ ಹೇಳಿಕೆ ಬಾಲಿಶ: ಸಚಿವ ಝಮೀರ್ ಅಹಮದ್
Update: 2018-06-23 22:15 IST
ಮಂಡ್ಯ, ಜೂ.23: ಬಿಜೆಪಿ ವಕ್ತಾರ ಟಿಪ್ಪುಸುಲ್ತಾನ್ ಮುಸಲ್ಮಾನ ಅಲ್ಲ ಎಂಬ ಹೇಳಿಕೆ ನೀಡಿರುವುದು ಬಾಲಿಶ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಸಚಿವ ಝಮೀರ್ ಅಹಮದ್ ಹೇಳಿದರು.
ಶನಿವಾರ ಮದ್ದೂರಿಗೆ ಭೇಟಿ ನೀಡಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಟಿಪ್ಪುಸುಲ್ತಾನ್ ಬಗೆಗೆ ಅವರಿಗೆ ತಿಳಿದಿಲ್ಲ. ಹೀಗಾಗಿ ಇಂತಹ ಅಸಂಬದ್ಧ ಹೇಳಿಕೆ ನೀಡಿದ್ದಾರೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ಮುಖ್ಯಮಂತ್ರಿ, ಅವರು ಬಡಜನರಿಗೆ ಸಾಕಷ್ಟು ಒಳ್ಳೆಯ ಕಾರ್ಯಕ್ರಮ ನೀಡುತ್ತಾರೆ. ಬಿಪಿಎಲ್ ಪಡಿತರದಾರರಿಗೆ 2 ಕೆಜಿ ಅಕ್ಕಿ ಹೆಚ್ಚಳ ಮಾಡಲು ಸಿಎಂ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಮೈಸೂರು ವಿವಿ ಮಾಜಿ ಸೆನೆಟ್ ಸದಸ್ಯ ವಿಕೆ.ಜಗದೀಶ್, ಪುರಸಭಾ ಸದಸ್ಯ ಮನ್ಸೂರ್‍ಖಾನ್, ಅಸ್ಲಂಪಾಷ, ಜಿಪಂ ಮಾಜಿ ಅಧ್ಯಕ್ಷ ಕಂಟಿ ಸುರೇಶ್, ಎಪಿಎಂಸಿ ಅಧ್ಯಕ್ಷ ನಾಗೇಶ್, ಇನಾಯತ್‍ವುಲ್ಲಾಖಾನ್, ಮಾಚಹಳ್ಳಿ ಕುಮಾರ್, ಯಶವಂತಗೌಡ ಇದ್ದರು.