'ಮುಂದಿನ ಚುನಾವಣೆಯಲ್ಲಿ ಬಿಎಸ್‍ಪಿ 50 ಸ್ಥಾನಗಳನ್ನು ಪಡೆಯುವ ಹಾಗೆ ಕೆಲಸ ಮಾಡಿ'
ಮೈಸೂರು,ಜೂ.23: ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಯುವ ಹೊತ್ತಿಗೆ ಬಿಎಸ್‍ಪಿ ಪಕ್ಷ 50 ಸ್ಥಾನಗಳನ್ನು ಗೆಲ್ಲುವ ರೀತಿ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದು ನೂತನ ಬಿಎಸ್‍ಪಿ ರಾಜ್ಯಾಧ್ಯಕ್ಷ ಪ್ರೊ.ಹರಿರಾಮ್ ಕರೆ ನೀಡಿದರು.
ಮೈಸೂರು ಜಿಲ್ಲಾ ಬಹುಜನ ಸಮಾಜ ಪಾರ್ಟಿ ವತಿಯಿಂದ ಶನಿವಾರ ಗೋವರ್ಧನ್ ಹೋಟೆಲ್ ಸಭಾಂಗಣದಲ್ಲಿ ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಮತ್ತು ಜಿಲ್ಲಾ ಸಮಿತಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಳೆದ ಹದಿನೈದು ವರ್ಷಗಳ ಫಲವಾಗಿ ಇಂದು ಕೊಳ್ಳೇಗಾಲದಲ್ಲಿ ಬಿಎಸ್‍ಪಿಯ ಎನ್.ಮಹೇಶ್ ಗೆಲುವು ಸಾಧಿಸಿದ್ದಾರೆ. ಮೊದಲ ಅವಧಿಯಲ್ಲೇ ಕ್ಯಾಬಿನೆಟ್ ಸಚಿವರಾಗಿದ್ದಾರೆ, ಅವರ ಗೆಲುವು ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಚೈತನ್ಯ ತುಂಬಿದೆ. ದಕ್ಷಿಣ ಭಾರತದಲ್ಲಿ ಬಿಎಸ್‍ಪಿ ಗೆಲುವು ಕಂಡಿರುವುದು ಇಡೀ ದೇಶದ ಗಮನ ಸೆಳೆದಿದೆ ಎಂದು ಹೇಳಿದರು.
ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಮಾಯಾವತಿಯವರ ಕೈ ಬಲಪಡಿಸಬೇಕು, ಈಗಿನಿಂದಲೇ ಕಾರ್ಯಕರ್ತರು ಪ್ರತಿ ಹಳ್ಳಿ ಮನೆಮನೆಗೆ ತೆರಳಿ ಬಿಎಸ್‍ಪಿ ಪಕ್ಷದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜನರಿಗೆ ತಿಳಿಸಿ ಅವರ ಮನಪರಿವರ್ತನೆಗೆ ಪ್ರಯತ್ನಿಸಬೇಕು. ಒಂದು ಸ್ಥಾನ ಪಡೆದ ನಾವು ಮುಂದಿನ ಚುನಾವಣೆ ವೇಳೆಗೆ 50 ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಮಾಯಾವತಿಯವರಿಗೆ ಇದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿಯಾಗುವ ಸಾಧ್ಯತೆ ಇದೆ. ಕನಿಷ್ಠ ನಾವು ಎರಡು ಸ್ಥಾನಗಳನ್ನಾದರು ಗೆಲ್ಲುವ ಮೂಲಕ ಮಾಯಾವತಿಯವರ ಕೈ ಬಲಪಡಿಸಬೇಕಿದೆ. ಮತ್ತೊಮ್ಮೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎರಡು ಸಾವಿರ ವರ್ಷಗಳ ಹಿಂದಕ್ಕೆ ನಾವು ಹೋಗಬೇಕಾಗುತ್ತೆ. ಹಾಗಾಗಿ ಎಚ್ಚರಿಕೆಯಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.
ದೆಹಲಿಯಲ್ಲಿ ರಾಷ್ಟ್ರಾಧ್ಯಕ್ಷೆ ಮಾಯಾವತಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ಎನ್.ಮಹೇಶ್ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಅವರ ಮಾರ್ಗದರ್ಶನದಲ್ಲಿ ರಾಜ್ಯಾಧ್ಯಕ್ಷ, ಉಪಾಧ್ಯಕ್ಷರು, ಐವರು ಕಾರ್ಯದರ್ಶಿಗಳು ಮತ್ತು ಓರ್ವ ಖಜಾಂಚಿಯನ್ನು ಮಾತ್ರ ನೇಮಕ ಮಾಡಲಾಗಿದೆ.ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಗುಲಬರ್ಗ ಸೇರಿದಂತೆ ಮೂರು ವಲಯಗಳನ್ನಾಗಿ ಮಾಡಲಾಗಿದೆ. ಪ್ರತಿಯೊಂದು ವಲಯಕ್ಕೂ ಓರ್ವ ಉಸ್ತುವಾರಿಯನ್ನು ನೇಮಿಸಿ ಮೂವರನ್ನು ಅವರ ಕೆಳಗೆ ಕಲಸಮಾಡಲು ನಿಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ವಲಯ ಉಸ್ತುವಾರಿಗಳಾದ ಸೋಸಲೆ ಸಿದ್ದರಾಜು, ಮಾದೇಶ್ ಉಸ್ತಾರ್, ಅರಕಲವಾಡಿ ನಾಗೇಂದ್ರ, ವಿಭಾಗ ಉಸ್ತುವಾರಿಗಳಾದ ಭೀನಮಹಳ್ಳಿ ಸೋಮೇಶ್, ಸಿದ್ದರಾಜು ಮಂಡ್ಯ, ನರಸಿಂಹ ಮೂರ್ತಿ, ಅಲಮೇಲು, ಶಿವಮಹದೇವು, ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ರಾಹುಲ್ ಮಾಡಿದರೆ, ಪ್ರಭುಸ್ವಾಮಿ ಸ್ವಾಗತ ಕೋರಿ ಪ್ರಸಾದ್ ವಂದಿಸಿದರು.
ರಾಜ್ಯದಲ್ಲಿ ಒಂದು ಸ್ಥಾನ ಗೆದ್ದ ಬಿಎಸ್‍ಪಿಯ ಎನ್.ಮಹೇಶ್ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಮುಂದೆ 25 ಅಥವಾ 30 ಸ್ಥಾನಗಳನ್ನು ಗೆದ್ದರೆ ರಾಜ್ಯದ ಮುಖ್ಯಮಂತ್ರಿಯಾಗುವುದರಲ್ಲಿ ಅನುಮಾನವೇ ಇಲ್ಲ.
-ಪ್ರೊ.ಹರಿರಾಮ್,ಬಿಎಸ್‍ಪಿ ರಾಜ್ಯಾಧ್ಯಕ್ಷ.