ಜನರ ಸಮಸ್ಯೆ ಬಗೆಹರಿಸಲು ಆಗದಿದ್ದರೆ ಜಾಗ ಬಿಟ್ಟು ಹೋಗಿ: ಅಧಿಕಾರಿಗಳಿಗೆ ಶಾಸಕ ತನ್ವೀರ್ ಸೇಠ್ ಎಚ್ಚರಿಕೆ

Update: 2018-06-23 16:53 GMT

ಮೈಸೂರು,ಜೂ.23: ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನರ ಸಮಸ್ಯೆಗೆ ಸ್ಪಂದಿಸುವ ರೀತಿ ಕೆಲಸ ಮಾಡಲು ಆಗದಿದ್ದರೆ ಜಾಗ ಬಿಟ್ಟು ಹೋಗಿ ಎಂದು ಅಧಿಕಾರಿಗಳಿಗೆ ನರಸಿಂಹ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಖಡಕ್ ಎಚ್ಚರಿಕೆ ನೀಡಿದರು.

ನಗರದ ನಜರ್‍ಬಾದ್‍ನಲ್ಲಿರುವ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಶನಿವಾರ ಶಾಸಕರಾದ ನಂತರ ಇದೇ ಮೊದಲ ಬಾರಿಗೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಸೇರಿದಂತೆ ಐದು ಇಲಾಖೆಗಳ ಅಧಿಕಾರಿಗಳ ಜೊತೆ ಕಳೆದ ಐದು ವರ್ಷದಲ್ಲಿ ಉಳಿದಿರುವ ಕೆಲಸಗಳ ಕುರಿತು ಚರ್ಚೆ ನಡೆಸಿದರು. 

ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನರ ಸಮಸ್ಯೆ ಗೆ ಸ್ಪಂದಿಸುವ ರೀತಿ ಕೆಲಸ ಮಾಡಲು ಆಗದಿದ್ದರೆ ಹೇಳಿ ನಿಮ್ಮ ಜಾಗದಲ್ಲಿ ಬೇರೆಯವರನ್ನು ತರುತ್ತೇನೆ. ಸಮಸ್ಯೆಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೆಲಸ ಆಗಬೇಕು. ನಿಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡು ಬಂದಿದ್ದೇನೆ. ನೀವು ಸಮಸ್ಯೆಗೆ ಸ್ಪಂದಿಸದೇ ಇರುವುದಕ್ಕೆ ಜನರಿಂದ ಅನೇಕ ರೀತಿಯ ಮಾತುಗಳನ್ನು ನಾನು ಕೇಳಿದ್ದೇನೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೆ.ಆರ್.ಆಸ್ಪತ್ರೆಗೆ ಬೇಕಾಗುವ ಸೌಲಭ್ಯಗಳನ್ನು ಸರಕಾರದ ಮಟ್ಟದಲ್ಲಿ ಕೊಡಿಸುತ್ತೇನೆ. ಸದ್ಯಕ್ಕೆ ದಾನಿಗಳಿಂದ ಹತ್ತು ಮಿಷನ್ ಕೊಡಿಸುತ್ತೇನೆ. ಅದನ್ನು ಯಾವ ಜಾಗದಲ್ಲಿ ಹಾಕಬೇಕು ಮತ್ತು ಯಾವ ರೀತಿ ನಿರ್ವಹಣೆ ಮಾಡಬೇಕೆನ್ನುವ ಜವಾಬ್ದಾರಿ ನಿಮ್ಮದೇ. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಿ. ಆಸ್ಪತ್ರೆಯಲ್ಲಿ ಇರುವ ಸಿಬ್ಬಂದಿ ಕೊರತೆ ಬಗ್ಗೆ ನನಗೆ ಮಾಹಿತಿ ನೀಡಿ. ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಕೆ.ಆರ್.ಆಸ್ಪತ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನರಸಿಂಹರಾಜ ಕ್ಷೇತ್ರದ ಭಾಗದಲ್ಲಿ ಬಹಳಷ್ಟು ಮಂದಿ ಬಡವರು ಇದ್ದಾರೆ.ಅದಕ್ಕಾಗಿ ಒಂದು ಉತ್ತಮ ಆಸ್ಪತ್ರೆಯ ಅವಶ್ಯಕತೆ ಇದೆ. ಅದಕ್ಕೆ ಬೇಕಾಗುವ ಜಾಗವನ್ನು ನಾನು ಮೂಡಾದಿಂದ ನೀಡುತ್ತೇನೆ. ನೀವು ಅದಕ್ಕೆ ಬೇಕಾಗುವ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು. 

ಗಾಂಧಿನಗರ, ಕ್ಯಾತಮಾರನಹಳ್ಳಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಡವರಿಗೆ ಮನೆ ಹಂಚುವಿಕೆ ವಿಚಾರದಲ್ಲಿ ಪಾರದರ್ಶಕವಾಗಿ ಕೆಲಸ ಮಾಡಿ. ಈಗಾಗಲೇ ನೀಡಿರುವ ಮನೆಗಳಲ್ಲಿ ಮಳೆ ಬಂದ ಸಂದರ್ಭಗಳಲ್ಲಿ ನೀರು ಗ್ರೌಂಡ್ ಫ್ಲೋರ್ ಗೆ ನುಗ್ಗುತ್ತಿದೆ. ಇದನ್ನು ತಡೆಗಟ್ಟಲು ಕ್ರಮ ವಹಿಸಿ. ಗಾಂಧಿನಗರದಲ್ಲಿ ಖಾಲಿ ಇರುವ ಮನೆಗಳನ್ನು ಶೀಘ್ರವಾಗಿ ಹಂಚಿಕೆ ಮಾಡಿ. ಹಂಚಿಕೆ ಮಾಡಬೇಕಾದ ಮನೆಗಳ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಕೊಡಿ. ಈಗಾಗಲೇ ಹಂಚಿಕೆಯಾಗಿರುವ ಮನೆಗಳಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ವಿಫಲರಾಗಿದ್ದೀರಿ. ಇದನ್ನು ನಿವಾರಿಸಲು ನೀವು ಗಮನ ಹರಿಸಿದ್ದೀರಾ ಎಂದು ಪ್ರಶ್ನಿಸಿದರು. ಮಹಾನಗರ ಪಾಲಿಕೆಗೆ ಈ ಮನೆಗಳನ್ನು ಹಸ್ತಾಂತರಿಸಲು ಮುಡಾದವರು ಮುಂದಾಗಿದ್ದಾರೆ. ಮೊದಲು ಉಳಿದ ಮನೆಗಳನ್ನು ಹಂಚುವ ಕಾರ್ಯ ಮಾಡಿ ಎಂದರು.

ಸಭೆಯಲ್ಲಿ ಮುಡಾ, ಮಹಾನಗರಪಾಲಿಕೆ, ಲೋಕೋಪಯೋಗಿ, ಆರೋಗ್ಯ, ಕೆ.ಆರ್.ಅಸ್ಪತ್ರೆ, ಒಳಚರಂಡಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News