ತುಮಕೂರು: ಹೊಸ ಉದ್ದಿಮೆದಾರರಿಗೆ ಮಾರ್ಗದರ್ಶನ ನೀಡುವ ಪ್ರೆಂಟಾಲ್ ಕಂಪನಿ ಆರಂಭ

Update: 2018-06-23 17:05 GMT

ತುಮಕೂರು,ಜೂ.23: ಹೊಸ ಉದ್ದಿಮೆದಾರರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಹಾಲಿ ಉದ್ದಿಮೆದಾರರ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಅಗತ್ಯವಿರುವ ಹೂಡಿಕೆದಾರರ ನಡುವೆ ಸಂಪರ್ಕ ಕಲ್ಪಿಸುವ ಪ್ರೆಂಟಾಲ್ ಬ್ಯುಸಿನೆಸ್ ಕಂಪನಿಯ ತುಮಕೂರು ಶಾಖೆ ಇಂದು ನಗರದ ವಿಲಾಸಿ ಡಿಲೈಟ್‍ನಲ್ಲಿ ಆರಂಭಿಸಲಾಯಿತು.

ಹೊಸದಾಗಿ ಕೈಗಾರಿಕೆ ಆರಂಭಿಸಬೇಕು ಎಂಬುವವರಿಗೆ ಅಗತ್ಯವಿರುವ ಸೂಕ್ತ ಮಾರ್ಗದರ್ಶನದ ಜೊತೆಗೆ, ಈಗಾಗಲೇ ಉದ್ದಿಮೆ ಆರಂಭಿಸಿ, ಉತ್ಪಾಧನೆಯಲ್ಲಿ ತೊಡಗಿರುವವರ ಬ್ರಾಂಡ್‍ಗಳಿಗೆ ಮಾರುಕಟ್ಟೆ ವಿಸ್ತರಣೆಗೆ ಅಗತ್ಯವಿರುವ ಹೂಡಿಕೆಯ ಸಹಪಾಠಿಗಳನ್ನು ನೀಡಿ ಸಹಕರಿಸುವ ಕೆಲಸವನ್ನು ಪ್ರೆಂಟಾಲ್ ಬ್ಯುಸಿನೆಸ್ ಸಂಸ್ಥೆ ದೇಶದ ಹಲವು ನಗರಗಳಲ್ಲಿ ಶಾಖೆಗಳನ್ನು ತೆರೆದು ಯುವ ಉದ್ದಿಮೆದಾರರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಾ ಬಂದಿದೆ. ಈಗಾಗಲೇ ದೆಹಲಿ, ಬಾಂಬೆ, ಕೊಲ್ಕತ್ತಾ, ವಡೋದರ,ನಾಗಪುರ, ಕರ್ನಾಟಕದ ಬೆಂಗಳೂರಿನಲ್ಲಿ ಶಾಖೆಗಳನ್ನು ತೆರೆದು ಯಶಸ್ವಿ ಮಾರ್ಗದರ್ಶನ ನೀಡುತ್ತಾ ಬಂದಿದ್ದು, ಪ್ರಸ್ತುತ ತುಮಕೂರು ನಗರದ ಹೊಯ್ಸಳ ಹೊಟೇಲ್ ಬಳಿ ತನ್ನ ಶಾಖೆಯನ್ನು ಆರಂಭಿಸಿದೆ.

ಪ್ರೆಂಟಾಲ್ ಬ್ಯುಸಿನೆಸ್ ತುಮಕೂರು ಶಾಖೆಯನ್ನು ಉದ್ಘಾಟಿಸಿದ ತುಮಕೂರು ಜಿಲ್ಲಾ ಚೆಂಬರ್ ಅಫ್ ಕಾಮರ್ಸ್‍ನ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ, ತುಮಕೂರು ಜಿಲ್ಲೆ ದೇಶದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಅಭಿವೃದ್ದಿ ಹೊಂದುತ್ತಿದ್ದು, ದಿನದಿಂದ ದಿನಕ್ಕೆ ಉದ್ದಿಮೆ ಆರಂಭಿಸಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಹೊಸದಾಗಿ ಈ ಕ್ಷೇತ್ರಕ್ಕೆ ಬರುವವರಿಗೆ ನಾವು ಯಾವ ಉತ್ಪನ್ನ ತಯಾರಿಸಿದರೆ ಹೆಚ್ಚು ಲಾಭ ಮಾಡಬಹುದು. ಯಾವ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಎಂಬುವುದರ ಬಗ್ಗೆ ಮಾಹಿತಿಗಳನ್ನು ಒಳಗೊಂಡ ಮಾರ್ಗದರ್ಶನ ನೀಡುವವರಿಲ್ಲದೆ ಉದ್ದಿಮೆ ಆರಂಭಿಸಿದ ಒಂದೆರಡು ವರ್ಷಗಳಲ್ಲಿ ನಷ್ಟ ಹೊಂದಿ ಬಾಗಿಲು ಮುಚ್ಚುವಂತಹ ಸ್ಥಿತಿಗೆ ಬರುತ್ತಾರೆ. ಪ್ರೆಂಟಾಲ್ ಬ್ಯುಸಿನೆಸ್ ಸಂಸ್ಥೆಯಂತಹ ಕಂಪನಿಯ ಅಗತ್ಯ ತುಮಕೂರಿನ ಜನತೆಗೆ ಇದೆ. ಯುವಜನರು ಇದರ ಲಾಭ ಪಡೆಯಬೇಕು ಎಂದರು.

ಉದ್ಯಮಿ ಹಾಗೂ ಜಿಲ್ಲಾ ಚೆಂಬರ್ ಅಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಬೆಂಗಳೂರಿಗೆ ಹತ್ತಿರವಿರುವ ತುಮಕೂರು ನಗರದಲ್ಲಿ ಹಣ ಹೂಡಿಕೆ ಮಾಡಲು ಸಾಕಷ್ಟು ಜನರು ಮುಂದೆ ಬಂದರೂ ಸರಿಯಾದ ಮಾರ್ಗದರ್ಶನವಿಲ್ಲದ ತಮ್ಮ ತಂದೆ, ಅಣ್ಣಂದಿರು ನಡೆಸುತ್ತಿರುವ ಜ್ಯೂವೆಲರಿ ಶಾಫ್, ದಿನಸಿ ಅಂಗಡಿ ಈ ರೀತಿಯ ಸಂಪ್ರದಾಯ ಉದ್ದಿಮೆಗಳಲ್ಲಿ ತೊಡಗಿದವರ ಸಂಖ್ಯೆಯೇ ಹೆಚ್ಚು. ಇಂತಹ ಯುವಜನರಿಗೆ ಹೊಸ ಉದ್ದಿಮೆಗಳ ಬಗ್ಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರೆಂಟಾಲ್ ಬ್ಯುಸಿನೆಸ್ ಕಂಪನಿ ಆರಂಭಗೊಂಡಿರುವುದು ಸಂತೋಷದ ವಿಚಾರ. ಯುವಜನರು ಇವರನ್ನು ಸಂಪರ್ಕಿಸಿ ಅಗತ್ಯ ಮಾರ್ಗದರ್ಶನ ಪಡೆದು, ತಮ್ಮ ಉದ್ದಿಮೆಯನ್ನು ಅಭಿವೃದ್ದಿಯನ್ನು ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರೆಂಟಾಲ್ ಬ್ಯುಸಿನೆಸ್ ಕಂಪನಿಯ ನಿರ್ದೇಶಕ ಗಣೇಶ್ ಹರಿಕ್ರಾಂತ ಮಾತನಾಡಿ, ಉದ್ದಿಮೆದಾರರು ಮತ್ತು ಹೂಡಿಕೆದಾರರ ನಡುವಿನ ಸೇತುವೆಯಾಗಿ ಪ್ರೆಂಟಾಲ್ ಕಂಪನಿ ಕೆಲಸ ಮಾಡಲಿದೆ. ಹೊಸದಾಗಿ ಉದ್ದಿಮೆ ಪ್ರಾರಂಭಿಸುವ ಯುವ ಜನರಿಗೆ ಒಂದು ಪ್ರದೇಶದಲ್ಲಿ ದೊರೆಯುವ ಕಚ್ಚಾವಸ್ತು, ಅಲ್ಲಿನ ಮಾರುಕಟ್ಟೆಯ ಬೇಡಿಕೆ ಸೇರಿದಂತೆ ಎಲ್ಲವನ್ನು ಅಧ್ಯಯನ ಮಾಡಿ, ಇಂತಹ ಉದ್ದಿಮೆ ಆರಂಭಿಸಿದರೆ ಯಶಸ್ವಿ ಉದ್ದಿಮೆದಾರರಾಗಿ ಹೊರಹೊಮ್ಮಬಹುದು ಎಂಬ ಸಮಗ್ರ ಮಾಹಿತಿಯನ್ನು ನೀಡಲಿದೆ. ಈಗಾಗಲೇ ದೇಶದ ಹಲವು ಪ್ರಮುಖ ನಗರಗಳಲ್ಲಿ ಶಾಖೆ ತೆರೆದು, ಸೇವೆಯನ್ನು ಪ್ರೆಂಟಾಲ್ ಕಂಪನಿ ನೀಡಲಿದೆ ಎಂದರು.

ವೇದಿಕೆಯಲ್ಲಿ ಪ್ರೆಂಟಾಲ್ ಬ್ಯುಸಿನೆಸ್ ಕಂಪನಿಯ ಸ್ಥಾಪಕ ಮುಖ್ಯಸ್ಥ ತುಷಾರ್  ಜೋಲಿ,ತುಮಕೂರು ಶಾಖೆಯ ಹಿರಿಯ ವ್ಯವಸ್ಥಾಪಕ ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು. ಹಲವು ಕಂಪನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News