ಸೋಮವಾರಪೇಟೆ: ಇನ್ನೂ ಪತ್ತೆಯಾಗದ ಜಲಪಾತಕ್ಕೆ ಬಿದ್ದು ಮೃತಪಟ್ಟ ಯುವಕನ ಶವ

Update: 2018-06-23 17:54 GMT

ಸೋಮವಾರಪೇಟೆ,ಜೂ.23: ಮಲ್ಲಳ್ಳಿ ಜಲಪಾತದಲ್ಲಿ ಕಾಲು ಜಾರಿಬಿದ್ದು ಮೃತಪಟ್ಟ ಪ್ರವಾಸಿಗನ ಮೃತದೇಹವನ್ನು ಹೊರತೆಗೆಯುವ ಪ್ರಯತ್ನ ವಿಫಲವಾಗಿದೆ.

ಹುಣಸೂರು ಮತ್ತು ಗರಗಂದೂರಿನ ನಾಲ್ವರು ಮುಳುಗು ತಜ್ಞರು, ಸ್ಥಳಿಯರು ಹಾಗು ಪಟ್ಟಣದ ಪೊಲೀಸರ ಸಹಕಾರದಿಂದ ಶನಿವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ತೆರಳಿ ಭೋರ್ಗೆರೆಯುತ್ತಿರುವ ಜಲಪಾತದಲ್ಲಿ 4 ಗಂಟೆಗಳ ಕಾಲ ಶವ ಹುಡುಕಾಟದ ಪ್ರಯತ್ನ ಮಾಡಿದ್ದಾರೆ. ಆದರೆ ಹಗ್ಗದ ಸಹಾಯದಿಂದ ಕಲ್ಲುಬಂಡೆಯನ್ನು ಇಳಿಯಲು ಸಾಧ್ಯವಾಗದೆ ಹಿಂದಿರುಗಿದ್ದಾರೆ. ನೀರಿನ ರಭಸ ಹೆಚ್ಚಿರುವುದರಿಂದ ಶವ ಇರುವ ಜಾಗವನ್ನು ಕಂಡು ಹಿಡಿಯಲು ಅಸಾಧ್ಯ ಎಂದು ತಿಳಿಸಿದ್ದು, ನೀರು ಕಡಿಮೆಯಾದರೆ ಪ್ರಯತ್ನ ಮುಂದುವರಿಸಬಹುದು ಎಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕುಶಾಲನಗರ ಸುಂದರನಗರದ ನಿವಾಸಿ ನಾಗರಾಜು ಎಂಬುವವರ ಪುತ್ರ ಮನೋಜ್(24) ತನ್ನ ಐವರು ಸ್ನೇಹಿತರುಗಳಾದ ಅರುಣ, ಅನಿಲ್‍ ಕುಮಾರ್, ಮಂಜು, ವಿಜಯಕುಮಾರ್, ಜಾನ್ಸನ್ ಎಂಬುವವರೊಂದಿಗೆ ಶಾಂತಳ್ಳಿಯ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ವಿವಾಹ ಸಮಾರಂಭಕ್ಕೆಂದು ಆಗಮಿಸಿ, ನಂತರ ಸಂಜೆ ಸುಮಾರು 4 ಗಂಟೆ ವೇಳೆಗೆ ಮೂರು ಮೋಟಾರು ಬೈಕಿನಲ್ಲಿ ಮಲ್ಲಳ್ಳಿ ಜಲಪಾತ ವೀಕ್ಷಿಸಲೆಂದು ತೆರಳಿದ್ದರು.

ಜಲಪಾತದ ಮೇಲ್ಬಾಗದಲ್ಲಿ ನಿಂತು ಮೊಬೈಲ್‍ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ಸಂದರ್ಭ ಕಾಲು ಜಾರಿ ಜಲಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದ. ಈ ಬಗ್ಗೆ ಸ್ನೇಹಿತನಾದ ಅನಿಲ್‍ಕುಮಾರ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂದು ತಡ ರಾತ್ರಿಯಾದ ಕಾರಣ ಶೋಧ ಕಾರ್ಯ ನಡೆಸಲು ಅಸಾಧ್ಯವಾದ ಹಿನ್ನಲೆಯಲ್ಲಿ ಶನಿವಾರ ಮೃತ ದೇಹವನ್ನು ಹುಡುಕುವ ಕಾರ್ಯ ನಡೆದಿತ್ತು. ಆದರೆ ಶನಿವಾರ ಕೂಡಾ ಮೃತದೇಹ ಪತ್ತೆಯಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News