ವಾಯುಪಡೆಗೆ ಆಯ್ಕೆಯಾದ ಚಹಾ ಮಾರಾಟಗಾರನ ಪುತ್ರಿ

Update: 2018-06-24 09:05 GMT

ಭೋಪಾಲ್, ಜೂ.24: ಮಧ್ಯಪ್ರದೇಶದ ಚಹಾ ಮಾರುವ ವ್ಯಕ್ತಿಯೊಬ್ಬರ ಪುತ್ರಿ ಇದೀಗ ಭಾರತೀಯ ವಾಯುಪಡೆಯ ಯುದ್ಧವಿಮಾನದ ಪೈಲಟ್ ಆಗಲು ಸಜ್ಜಾಗಿದ್ದಾಳೆ. ಮಧ್ಯಪ್ರದೇಶದಲ್ಲಿ ಈ ವರ್ಷ ನಡೆದ ಆಡಳಿತಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಏಕೈಕ ಮಹಿಳೆಯಾಗಿದ್ದಾರೆ ಆಂಚಲ್ ಗಂಗ್ವಾಲ್.

ತನ್ನ ಈ ಕನಸು ನನಸಾದ ಬಗ್ಗೆ ಎಎನ್‍ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಆಂಚಲ್, "ನಾನು ಹನ್ನೆರಡನೇ ತರಗತಿಯಲ್ಲಿದ್ದಾಗ, ಉತ್ತರಾಖಂಡ ಪ್ರವಾಹ ಸಂದರ್ಭದಲ್ಲಿ ವಾಯುಪಡೆಯ ಪರಿಹಾರ ಕಾರ್ಯಾಚರಣೆಯಿಂದ ಸ್ಫೂರ್ತಿ ಪಡೆದಿದ್ದೆ. ಆಗಲೇ ರಕ್ಷಣಾ ಪಡೆಗೆ ಸೇರಬೇಕು ಎಂಬ ಕನಸು ನನ್ನಲ್ಲಿ ಮೊಳಕೆಯೊಡೆದಿತ್ತು" ಎಂದು ಹೇಳಿದ್ದಾರೆ.

ಆಂಚಲ್ ರ ಬದ್ಧತೆ ಮತ್ತು ಸಾಧನೆಯ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಹೊಸ ಮಾರ್ಗವನ್ನು ಹುಟ್ಟುಹಾಕುವಲ್ಲಿ ಆಕೆಯ ಬದ್ಧತೆ ಹಾಗೂ ಸಾಧನೆ ಕೆಲಸ ಮಾಡಿದೆ. ಮಧ್ಯಪ್ರದೇಶದ ಹೆಮ್ಮೆಯ ಪುತ್ರಿ ಆಂಚಲ್ ಗಂಗ್ವಾಲ್‍ ಸಾಧನೆ ಫಲಿಸಿದೆ. 22 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಆರು ಲಕ್ಷ ಮಂದಿಯ ಪೈಕಿ ಯಶಸ್ಸು ಸಾಧಿಸಿದ ಹೆಮ್ಮೆ ಆಕೆಯದು" ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News