ಅಪಪ್ರಚಾರವನ್ನು ಯಾವುದೇ ಕಾರಣಕ್ಕೂ ಸಹಿಸೆವು: ಲಿಂಗಾಯತ ಮಹಾಸಭಾ ಮುಖಂಡ ಜಾಮದಾರ್

Update: 2018-06-24 13:40 GMT

ಬೆಂಗಳೂರು/ಧಾರವಾಡ, ಜೂ. 24: ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಬಗ್ಗೆ ಅಪಪ್ರಚಾರ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಾಮದಾರ್ ಎಚ್ಚರಿಸಿದ್ದಾರೆ.

ರವಿವಾರ ಧಾರವಾಡದ ಮುರುಘ ಮಠದಲ್ಲಿ ಲಿಂಗಾಯತ ಧರ್ಮ ಚಿಂತನಾ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ವೇಳೆ ಧರ್ಮ ಒಡೆಯಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಹೋದಲೆಲ್ಲಾ ಅಪಪ್ರಚಾರ ನಡೆಸಿದರು. ಅಲ್ಲದೆ, ‘ಲಿಂಗಾತಯ ಧರ್ಮ ಒಡೆಯಲು ಬಿಡುವುದಿಲ್ಲ’ ಎಂದು ಹೇಳಿಕೆ ನೀಡಿದರು. ಹೀಗೆ ಮಾತನಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಅವರೇನು ಪ್ರಧಾನಮಂತ್ರಿಯೋ ಅಥವಾ ಮುಖ್ಯಮಂತ್ರಿಯೋ ಎಂದು ಎಂದು ಖಾರವಾಗಿ ಪ್ರಶ್ನಿಸಿದರು.

ಹೋರಾಟ ನಿಲ್ಲದು: ಸರಕಾರಗಳು ಬರುತ್ತವೆ, ಹೋಗುತ್ತವೆ. ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ, ಕೊನೆಯಲ್ಲಿ ಉಳಿಯುವುದು ಧರ್ಮ ಮಾತ್ರ. ಲಿಂಗಾತಯ ಪ್ರತ್ಯೇಕ ಧರ್ಮದ ಹೋರಾಟ ಈಗಷ್ಟೇ ಆರಂಭವಾಗಿದ್ದು, ಇದು ಯಾವುದೇ ಕಾರಣಕ್ಕೂ ನಿಲ್ಲದು ಎಂದರು.

ಬಿಜೆಪಿಗೆ ನಾವು ಪ್ರತ್ಯೇಕ ಧರ್ಮ ಮಾಡುತ್ತೇವೆಂಬ ನಂಬಿಕೆ ಇಲ್ಲ. ಆದರೆ ನಮ್ಮ ಬಳಿ ಸೂಕ್ತ ಸಾಕ್ಷ್ಯಾಧಾರಗಳಿವೆ. ಅದನ್ನು ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಕಳೆದ ಬಾರಿ ಲಿಂಗಾಯತ ಹೋರಾಟಕ್ಕೆ ಹಲವು ರ್ಯಾಲಿಗಳನ್ನು ನಡೆಸಿದ್ದೇವೆ. ಆದರೆ ಈ ಹೋರಾಟ ಯಾವುದೇ ಪಕ್ಷಕ್ಕೆ ಸೀಮಿತವಾದುದ್ದಲ್ಲ ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿನ ಹೋರಾಟ ಅಪಪ್ರಚಾರವನ್ನೂ ಮೀರಿ ಗ್ರಾಮ, ತಾಲೂಕು, ಪಟ್ಟಣ ಹಾಗೂ ನಗರ ಮಟ್ಟದಲ್ಲಿ ನಾವು ಸಂಘಟಿತರಾಗಬೇಕಿದೆ ಎಂದ ಅವರು, ಬಸವಣ್ಣನ ತತ್ವದ ಆಧಾರದ ಮೇಲೆ ಲಿಂಗಾಯತ ಪ್ರತ್ಯೇಕ ಧರ್ಮ ಆಗಲೇಬೇಕು ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News