‘ಸಮನ್ವಯ ಸಮಿತಿ’ ಅಧ್ಯಕ್ಷ ಸಿದ್ದರಾಮಯ್ಯರಿಗೆ ಸಂಪುಟ ದರ್ಜೆ ಸ್ಥಾನಮಾನ: ಡಾ.ಜಿ.ಪರಮೇಶ್ವರ್

Update: 2018-06-24 14:27 GMT

ಬೆಂಗಳೂರು, ಜೂ. 24: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲು ಉದ್ದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಸದಾಶಿವ ನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದು, ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಬಗ್ಗೆ ಚಿಂತನೆ ಇದೆ ಎಂದರು.

ಬೇಡಿಕೆ ಸತ್ಯ: ಸರಕಾರಿ ನಿವಾಸ ಬೇಕೆಂದು ಬೇಡಿಕೆ ಇಟ್ಟಿದ್ದೇನೆ. ಇದೇ ಬೇಕು ಎಂದು ಹೇಳಿಲ್ಲ. ಸದ್ಯ ನಾನು ಇರುವ ನಿವೇಶನದಲ್ಲಿ ಸಾರ್ವಜನಿಕರ ಭೇಟಿಗೆ ಕಷ್ಟವಾಗುತ್ತಿದೆ. ಸಿದ್ದರಾಮಯ್ಯನವರ ನಿವಾಸ ‘ಕಾವೇರಿ’ ಬೇಕೆಂಬ ಬೇಡಿಕೆ ನಾನಿಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕೆಲ ಅತೃಪ್ತ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಾತಿ ಸಂಬಂಧ ನಡೆಸಿರುವ ವಿಷಯ ನನಗೆ ಗೊತ್ತಿಲ್ಲ ಎಂದು ಡಾ.ಪರಮೇಶ್ವರ್ ಹೇಳಿದರು.

ಬಿಜೆಪಿಯಿಂದ ಗೊಂದಲ: ಹಜ್ ಭವನಕ್ಕೆ ಟಿಪ್ಪು ಹೆಸರಿಡುವ ಬಗ್ಗೆ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಸ್ಲಿಮ್ ಸಮುದಾಯದವರು ಟಿಪ್ಪು ಹೆಸರಿಡುವಂತೆ ಮನವಿ ಮಾಡಿದ್ದಾರೆ. ಆದರೆ,ಈ ಬಗ್ಗೆ ಬಿಜೆಪಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News