ಸಂವಿಧಾನ ನಾಶವೇ ಬಿಜೆಪಿಯ ಮುಖ್ಯ ಗುರಿ: ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್

Update: 2018-06-24 14:13 GMT

ಬೆಂಗಳೂರು, ಜು.24: ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲಿನ ಆಧಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಭಾರತದ ಸಂವಿಧಾನವನ್ನು ನಾಶ ಮಾಡುವುದೇ ಬಿಜೆಪಿ ಮುಖ್ಯ ಗುರಿಯಾಗಿದೆ ಎಂದು ಹಿರಿಯ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಎಚ್ಚರಿಸಿದ್ದಾರೆ.

ರವಿವಾರ ನಗರದ ಕಸಾಪದಲ್ಲಿ ಲೇಖಕ ವಿಕಾಸ್ ಆರ್.ಮೌರ್ಯರವರ ‘ಚಮ್ಮಟಿಗೆ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಸಚಿವ ಅನಂತಕುಮಾರ ಹೆಗಡೆ, ಬಹಿರಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಿಸುವುದೆ ನಮ್ಮ ಗುರಿಯೆಂದು ಸ್ಪಷ್ಟ ಪಡಿಸಿದ್ದಾರೆ. ಇದು ಆರೆಸ್ಸೆಸ್‌ನ ಮೂಲ ಸಿದ್ಧಾಂತವೆಂದು ತಿಳಿಸಿದರು.

ಆರೆಸ್ಸೆಸ್‌ಗೆ ಚುನಾವಣೆ, ಸಂಸತ್, ಜನಪ್ರತಿನಿಧಿಗಳು ಯಾರು ಬೇಕಿಲ್ಲ. ಆರೆಸ್ಸೆಸ್ ಸಿದ್ಧಾಂತದಡಿ ಕೆಲಸ ಮಾಡುವಂತಹ ಸರ್ವಾಧಿಕಾರಿಯೊಬ್ಬನ ಮೂಲಕ ಆಡಳಿತ ನಡೆಸಲು ಷಡ್ಯಂತ್ರ ರೂಪಿಸುತ್ತಿದೆ. ಹೀಗಾಗಿ ಪ್ರಗತಿಪರರು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಒಗ್ಗೂಡಕಾಗಿದೆ ಎಂದು ಅವರು ಹೇಳಿದರು.

ಸಂವಿಧಾನ ಉಳಿಸುವುದೇ ಮುಖ್ಯ ಧ್ಯೇಯ: ದಲಿತ, ಮಾರ್ಕ್ಸ್ ಸಿದ್ಧಾಂತಗಳ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗಿಟ್ಟು ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆಗಳು ರೂಪಿಸಿಕೊಂಡು ಕಾರ್ಯಮಗ್ನರಾಗಬೇಕಾಗಿದೆ ಎಂದು ಅವರು ಆಶಿಸಿದರು.

‘ಸಂಘ ಪರಿವಾರ ಶೂದ್ರ-ದಲಿತ ಸಮುದಾಯಕ್ಕೆ ಸೇರಿದ ಯುವಕರಿಂದಲೇ ಪ್ರಗತಿಪರರನ್ನು ಕೊಲ್ಲಿಸುವಂತಹ ಸಂಚು ರೂಪಿಸುತ್ತಿದೆ. ಗೌರಿ ಲಂಕೇಶ್ ಹತ್ಯೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪರಶುರಾಮ್ ವಾಗ್ಮೋರೆ ದಲಿತ ಇಲ್ಲವೆ ಹಿಂದುಳಿದ ಸಮುದಾಯಕ್ಕೆ ಸೇರಿದ ಯುವಕನಾಗಿದ್ದಾನೆ. ಹೀಗಾಗಿ ಸಂಘ ಪರಿವಾರದ ಕುತಂತ್ರ ನೀತಿಗಳ ವಿರುದ್ಧ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ’
-ಡಾ.ಬಂಜಗೆರೆ ಜಯಪ್ರಕಾಶ್, ಹಿರಿಯ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News