ಜೂ.20 ರಿಂದ ಜು.30 ರವರೆಗೆ ಟ್ರೈನ್ ಟು ಪಾಕಿಸ್ತಾನ್ ಓದಿನ ಅಭಿಯಾನ

Update: 2018-06-24 14:54 GMT

ಬೆಂಗಳೂರು, ಜೂ.24: ಕಳೆದ ವರ್ಷ ‘ಚಿರಸ್ಮರಣೆ ಓದು ಕಯ್ಯೂರು ನೋಡು’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದ ‘ಕೋಶ ಓದು ದೇಶ ನೋಡು’ ಯುವಜನರ ತಂಡ ಅದರ ಮುಂದುವರಿದ ಭಾಗವಾಗಿ ಅದೇ ರೀತಿಯ ‘ಟ್ರೈನ್ ಟು ಪಾಕಿಸ್ತಾನ್’ ಓದಿನ ಕಾರ್ಯಕ್ರಮವನ್ನು ರೂಪಿಸಿದೆ.

ಮುಂದಿನ ವರ್ಷ ದೇಶದಲ್ಲಿ ಪಾರ್ಲಿಮೆಂಟ್ ಚುನಾವಣೆಗಳು ನಡೆಯಲಿದ್ದು, ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದಲ್ಲಿ ಕೋಮುದ್ವೇಷವನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ. ಧರ್ಮದ ಆಧಾರದ ಮೇಲೆ ಮತದಾರರನ್ನು ಧ್ರುವೀಕರಣ ಮಾಡಲಾಗುತ್ತಿದೆ. ಅದರ ಒಂದು ಸಣ್ಣ ಪ್ರಯತ್ನ ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಂಡು ಬಂದಿರುವುದು ಕಾಣಬಹುದು. ಕರಾವಳಿ ಮತ್ತು ಮಲೆನಾಡಿನಲ್ಲಿ ಪ್ರಬಲವಾಗಿರುವ ಕೋಮುವಾದಿ ಸಿದ್ಧಾಂತ, ಮುಂದಿನ ಚುನಾವಣೆಯ ವೇಳೆ ರಾಜ್ಯಾದ್ಯಂತ ಹರಡಿ ಅಂತರ್ಯುದ್ಧದತ್ತ ಸಾಗಬಹುದು. ಈ ಕುರಿತು ಯುವ ಸಮುದಾಯವನ್ನು ಎಚ್ಚರದಿಂದ ಇರಿಸಬೇಕಾದ ಅಗತ್ಯವಿದೆ. ಓದು ಅಂತಹ ಒಂದು ಎಚ್ಚರಿಕೆಯ ಅರಿವನ್ನು ಸಮರ್ಥವಾಗಿಸಬಲ್ಲದು ಎಂದು ಯುವಜನರ ತಂಡ ಅಭಿಪ್ರಾಯಿಸಿದೆ.

ದೇಶ ವಿಭಜನೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆದಿರುವ ಕೋಮು ದಂಗೆಗಳ ನೆನಪುಗಳು ಎಂದಿಗೂ ಮಾಸುವುದಿಲ್ಲ. ಅಂದಿನ ಸಂದರ್ಭದಲ್ಲಿ ನಡೆದ ನರಮೇದದಲ್ಲಿ ಕನಿಷ್ಠ 12 ಲಕ್ಷ ಹಿಂದೂ, ಮುಸ್ಲಿಮ್, ಸಿಖ್ಖ ಸಮುದಾಯಗಳ ಜನರು ಪ್ರಾಣಾರ್ಪಣೆ ಮಾಡಿದ್ದಾರೆ. ಅತ್ಯಾಚಾರ ಮತ್ತು ಸುಲಿಗೆಗಳು ಎಣಿಸಲಾಗದಷ್ಟಿದೆ. ಆ ಅಮಾನವೀಯ ದಂಗೆಗಳನ್ನು ನೆನಪಿಸಿಕೊಂಡರೆ ಮೈ ನಡಗಿಸುತ್ತದೆ. ಅಂದಿನ ದುರಂತ ಕಥೆಗಳನ್ನು ಹಿಂದಿ ಮತ್ತು ಉರ್ದು ಸಾಹಿತ್ಯದ ಮೂಲಕ ಸಾದತ್ ಹಸನ್ ಮಾಂಟೋ ಕಥೆಗಳು ಮತ್ತು ಖುಷ್ವಂತ್ ಸಿಂಗ್ ಅವರ ಕೃತಿಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಹಿಂಸೆ, ಮನುಷ್ಯ ಸಂಬಂಧಗಳ ತೊಳಲಾಟಗಳನ್ನು ಖುಷ್ವಂತ್ ಸಿಂಗ್ ತಮ್ಮ ‘ಟ್ರೈನ್ ಟು ಪಾಕಿಸ್ತಾನ್’ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಭಾರತ ಈಗ ಮತ್ತೊಂದು ಭಾರಿಗೆ ದೇಶ ವಿಭಜನೆ ನಡೆದ ಸಂದರ್ಭದಲ್ಲಿ ನಡೆದ ನರಮೇದದ ಕಡೆಗೆ ನಿಧಾನಗತಿಯಲ್ಲಿ ದಾಪುಗಾಲಿಡುತ್ತಿದೆ. ಅಂತಹ ನರಮೇದವನ್ನು ಭರಿಸುವ ಶಕ್ತಿ ಇಂದಿನ ನಮ್ಮ ಸಮಾಜಕ್ಕಿಲ್ಲ. ಹೀಗಾಗಿ, ಅಂದಿನ ನೋವುಗಳನ್ನು, ಕೋಮು ಸಂಘರ್ಷದ ನಿರರ್ಥಕತೆಯನ್ನು ಅರ್ಥ ಮಾಡಿಕೊಂಡರೆ, ಅಂತಹ ದುರಂತದ ಸಾಧ್ಯತೆಯಿಂದ ಪಾರಾಗುವ ಪ್ರಯತ್ನ ಮಾಡಲು ಸಾಧ್ಯ. ಅದರ ಪರಿಚಯ ಮಾಡುವ ಸಲುವಾಗಿ ಕೋಶ ಓದು ದೇಶ ನೋಡು ತಂಡ ಈ ಬಾರಿಗೆ ಟ್ರೈನ್ ಟು ಪಾಕಿಸ್ತಾನ್ ಅಭಿಯಾನಕ್ಕೆ ಚಾಲನೆ ನೀಡಿದೆ.

ಜೂ.20 ರಿಂದ ಜು.30 ರವರೆಗೂ ಅಭಿಯಾನ ನಡೆಯಲಿದ್ದು, ಆ.4 ಮತ್ತು 5 ರಂದು ಮಂಗಳೂರಿನಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಓದು, ಸಂವಾದ, ಚರ್ಚೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಅಲ್ಲದೆ, ತಂಡವು ಟ್ರೈನ್ ಟು ಪಾಕಿಸ್ತಾನ್ ಅಭಿಯಾನಕ್ಕೆ ಜೊತೆಯಾಗಲು ಇಚ್ಛಿಸುವವರು ನಮ್ಮನ್ನು ಸಂಪರ್ಕಿಸಬಹುದು ಎಂದು ಅಭಿಯಾನದ ನಿರ್ವಾಹಕಿ ಚೇತನಾ ತೀರ್ಥಹಳ್ಳಿ ತಿಳಿಸಿದ್ದಾರೆ.

ಸಮಾಜದಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸುವುದು, ಮತ್ತೊಂದು ಕಡೆ ಕೋಮುವಾದದ ದುರಂತಗಳನ್ನು ಮನದಟ್ಟು ಮಾಡಿಸಿ ಸೌಹಾರ್ದ ಜೀವನಕ್ಕೆ ಪ್ರೇರಣೆ ನೀಡುವುದು ನಮ್ಮ ಉದ್ದೇಶ’
-ಮುನೀರ್ ಕಾಟಿಪಳ್ಳ ಅಭಿಯಾನದ ರೂವಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News