ಕಾವೇರಿ ನದಿ ಪ್ರಾಧಿಕಾರ ರಚನೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಅಗತ್ಯ: ದೇವೇಗೌಡ
ಬೆಂಗಳೂರು, ಜೂ. 24: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಲೋಕಸಭೆಯಲ್ಲಿ ಚರ್ಚಿಸಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ರಚನೆ ಮಾಡಬೇಕೆಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ರವಿವಾರ ಇಲ್ಲಿನ ಪದ್ಮನಾಭನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ. 35 ತಾಲೂಕಿಗೆ ಸೇರಿದ್ದು. ಹೀಗಾಗಿ ನೀರು ಹಂಚಿಕೆ ವಿಚಾರದ ಕುರಿತು ಲೋಕಸಭೆಯಲ್ಲಿ ಚರ್ಚೆ ಅಗತ್ಯ ಎಂದು ಪ್ರತಿಪಾದಿಸಿದರು.
ಇತ್ತೀಚೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ. ಕಾವೇರಿ ವ್ಯಾಜ್ಯದ ಕುರಿತು ಪ್ರಧಾನಿ ಮೋದಿ ಹಾಗೂ ಕರ್ನಾಟಕ ರಾಜ್ಯದ ಸಂಸದರಿಗೆ ಮಾಹಿತಿ ನೀಡಲು ಪುಸ್ತಕವೊಂದನ್ನು ಹೊರತರುವಂತೆ ಸಿಎಂ ಕುಮಾರಸ್ವಾಮಿಗೆ ಸಲಹೆ ನೀಡಿದ್ದೇನೆ ಎಂದು ದೇವೇಗೌಡ ತಿಳಿಸಿದರು.
ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಒಳಗೊಂಡ ಕೃತಿಯನ್ನು ಹೊರತರಲು ಸೂಚಿಸಿದ್ದೇನೆ. ರಾಜ್ಯಕ್ಕೆ ಕಾವೇರಿ ನೀರು ಎಷ್ಟು ಉಳಿಸಲು ಸಾಧ್ಯವೋ ಅಷ್ಟು ಉಳಿಸಲು ಶ್ರಮಿಸುತ್ತೇನೆ ಎಂದು ದೇವೇಗೌಡ ಇದೇ ವೇಳೆ ಹೇಳಿದರು.