ಬೇಜಬ್ದಾರಿಯುತ ತನಿಖೆ ನಡೆಸಿದ ಪೊಲೀಸ್ ಇಲಾಖೆಗೆ ಚಾಟಿ ಬೀಸಿದ ಹೈಕೋರ್ಟ್

Update: 2018-06-24 15:00 GMT

ಬೆಂಗಳೂರು, ಜೂ.24: ಐಪಿಎಲ್ ಕ್ರಿಕೆಟ್ ಪಂದ್ಯವೊಂದರ ಬೆಟ್ಟಿಂಗ್ ಕುರಿತ ಪ್ರಕರಣದಲ್ಲಿ ಬೇಜಬ್ದಾರಿಯುತ ತನಿಖೆ ನಡೆಸಿದ್ದ ರಾಜ್ಯ ಪೊಲೀಸ್ ಇಲಾಖೆಗೆ ಹೈಕೋರ್ಟ್ ಚೀಮಾರಿ ಹಾಕಿದೆ. ಅಲ್ಲದೆ, ಇಂತಹ ಪ್ರಕರಣಗಳ ಸಮರ್ಥ ತನಿಖೆಗೆ ತನಿಖಾಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.

ಟಿ.ವಿಯಲ್ಲಿ ಐಪಿಎಲ್ ಪಂದ್ಯ ವೀಕ್ಷಿಸುತ್ತಿದ್ದ ಕಾರಣಕ್ಕೆ ಇಬ್ಬರನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದ ದಾವಣಗೆರೆ ಕೆಟಿಜೆ ಠಾಣಾ ಪೊಲೀಸರು, ಪ್ರಕರಣದಲ್ಲಿ ಯಾರೆಲ್ಲಾ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದರು? ಬೆಟ್ಟಿಂಗ್ ನಡೆಸಿದವರು ಯಾರಿಗೆ ಹಣ ಮರು ಪಾವತಿಸದೆ ವಂಚಿಸಿದ್ದರು ಎಂಬಿತ್ಯಾದಿ ವಿಚಾರಗಳನ್ನು ಕಂಡು ಹಿಡಿದಿರಲಿಲ್ಲ. ಇದರಿಂದ ಪೊಲೀಸರು ಸಮರ್ಥ ತನಿಖೆ ನಡೆಸಿಲ್ಲ ಎಂದು ಹೈಕೋರ್ಟ್ ಪ್ರಕರಣವನ್ನು ರದ್ದುಪಡಿಸಿದೆ. ಹಾಗೆಯೇ, ಇಂತಹ ಪ್ರಕರಣಗಳ ತನಿಖೆ ವೇಳೆ ತನಿಖಾಧಿಕಾರಿಗಳಿಗೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಆಯುಕ್ತರು ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಆದೇಶಿಸಿ, ಆದೇಶದ ಪ್ರತಿ ಕಳುಹಿಸಿಕೊಡಲು ರಿಜಿಸ್ಟ್ರಾರ್ ಗೆ ನಿರ್ದೇಶಿಸಿದೆ.

ಐಪಿಎಲ್ ಪಂದ್ಯಾವಳಿಯ ಗುಜರಾತ್ ಲಯನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಕ್ರಿಕೆಟ್ ಪಂದ್ಯದ ಸಂಬಂಧ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂದು 2016ರ ಎ.16ರಂದು ರಾತ್ರಿ ಕೆಟಿಜೆ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತವರ ಸಿಬ್ಬಂದಿ ದಾವಣಗೆರೆ ಸೆಂಟ್ರಲ್ ವೃತ್ತದ ಪಿ.ಬಿ.ರಸ್ತೆಯ ಲಾಡ್ಜ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ರಾಹುಲ್ ಮತ್ತು ಪಿ.ರಾಕೇಶ್ ಎಂಬುವರನ್ನು ಬಂಧಿಸಿ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 78(6) ಅಡಿ ಎಫ್‌ಐಆರ್ ದಾಖಲಿಸಿತ್ತು. ಬಳಿಕ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಲು ಕೋರಿ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‌ನಲ್ಲಿ ವಿಚಾರಣೆಯ ವೇಳೆ ಪೊಲೀಸರು, ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದೆವು. ರಾಹುಲ್ ಮತ್ತು ರಾಕೇಶ್ ಲಾಡ್ಜ್‌ನ ಕೊಠಡಿ ಸಂಖ್ಯೆ-152ರಲ್ಲಿ ಟಿವಿಯಲ್ಲಿ ಐಪಿಎಲ್ ಪಂದ್ಯ ನೋಡುತ್ತಿದ್ದರು. ಅವರು ಜನರಿಂದ ಹಣ ಸಂಗ್ರಹಿಸಿ, ಮರು ಪಾವತಿಸದೆ ವಂಚಿಸಿದ್ದಾರೆ ಎಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಆರೋಪ ಸಾಬೀತುಪಡಿಸುವ ಸಾಕ್ಷಾಧಾರವನ್ನು ಆರೋಪಪಟ್ಟಿಯಲ್ಲಿ ಒದಗಿಸಿಲ್ಲ. ಹೀಗಾಗಿ, ಬೆಟ್ಟಿಂಗ್ ನಡೆಸಲಾಗುತ್ತಿತ್ತು ಎನ್ನಲಾಗದು ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರರ ವಿರುದ್ಧ ಕೆಟಿಜೆ ಪೊಲೀಸರು ದಾಖಲಿಸಿದ್ದ ದೂರು ಮತ್ತದರ ದಾವಣಗೆರೆ 2ನೆ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿನ ವಿಚಾರಣೆ ರದ್ದುಪಡಿಸಿತು.

ಪ್ರಕರಣದಲ್ಲಿ ಅಸಮರ್ಪಕ ತನಿಖೆ ನಡೆಸಿರುವುದಕ್ಕೆ ಪೊಲೀಸರಿಗೆ ಚಾಟಿ ಬೀಸಿರುವ ಹೈಕೋರ್ಟ್, ಪ್ರಕರಣದಲ್ಲಿ ಬೆಟ್ಟಿಂಗ್‌ನಲ್ಲಿ ಯಾರು ಪಾಲೊಂಡಿದ್ದರು? ಆರೋಪಿಗಳಿಗೆ ಯಾರು ಹಣ ಪಾವತಿಸಿದ್ದರು? ಈ ಕುರಿತು ಯಾರು ದೂರು ದಾಖಲಿಸಿದ್ದಾರೆ ಎಂಬ ಅಂಶಗಳನ್ನು ಪೊಲೀಸರು ಕಂಡುಹಿಡಿದಿಲ್ಲ. ಎರಡು ಕೈಗಳಿಲ್ಲದೆ ಚಪ್ಪಾಳೆ ಹೊಡೆಯಲು ಆಗಲ್ಲ. ಅದೇ ರೀತಿ ಸಾರ್ವಜನಿಕ ಸಹಾಯವಿಲ್ಲದೆ ಬೆಟ್ಟಿಂಗ್ ನಡೆಸಲಾಗದು ಎಂಬುದು ಸತ್ಯ ಎಂದು ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News