ನಗರ ಹೊರವಲಯದಲ್ಲಿ ಗ್ಯಾರೇಜ್ ತೆರೆಯಲು ಭೂಮಿ ಗುರುತಿಸಿ: ಅಧಿಕಾರಿಗಳಿಗೆ ಚಿಕ್ಕಮಗಳೂರು ಡಿಸಿ ಸೂಚನೆ

Update: 2018-06-24 16:17 GMT

ಚಿಕ್ಕಮಗಳೂರು, ಜೂ.24:  ನಗರದ ಹೊರ ವಲಯದಲ್ಲಿ ವಾಹನಗಳ ಗ್ಯಾರೇಜ್‍ಗಳನ್ನು ತೆರೆಯಲು ಭೂಮಿ ಗುರುತಿಸುವಂತೆ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೈಗಾರಿಕಾ ಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಸುಮಾರು 150 ರಿಂದ 200 ಗ್ಯಾರೇಜ್‍ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಈ ಸಂಬಂಧ ಗ್ಯಾರೇಜ್ ಮಾಲೀಕರ ಸಂಘದಿಂದ ಸಣ್ಣ ಕೈಗಾರಿಕಾ ಸಚಿವರಿಗೆ ಮನವಿ ಸಲ್ಲಿಸಿ ಗ್ಯಾರೇಜ್‍ಗಳನ್ನು ಮತ್ತು ವರ್ಕ್‍ಷಾಪ್‍ಗಳನ್ನು ಸ್ಥಾಪಿಸಲು ಸೂಕ್ತ ಜಾಗವನ್ನು ಗುರುತಿಸಿ ಅನುಕೂಲವಾಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಸುಮಾರು 10ರಿಂದ 15 ಎಕರೆ ಭೂಮಿ ಬೇಕಾಗುತ್ತದೆ. ಸರಕಾರಿ ಭೂಮಿ ಲಭ್ಯವಿಲ್ಲದಿದ್ದರೆ, ಖಾಸಗಿಯವರಿಂದ ಭೂಮಿಯನ್ನು ಖರೀದಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರಕಾರ ಮೊದಲ ಹಂತದಲ್ಲಿ ಚಿಕ್ಕಮಗಳೂರು, ಮಡಿಕೇರಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದ್ದು, ಇದಕ್ಕಾಗಿ 100 - 26 ಎಕರೆ ಭೂಮಿಯನ್ನು ಸರ್ವೇ ಮಾಡಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿಗಳು ವರದಿ ನೀಡಿದ್ದಾರೆ. ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯವನ್ನು ಕೆಎಸ್‍ಐಐಡಿಸಿರವರಿಗೆ ವಹಿಸಿಲಾಗಿದೆ ಎಂದರು.

ವಿಮಾನ ನಿಲ್ದಾಣದ ಅಭಿವೃದ್ಧಿಗೆ ಕಾಯ್ದಿರಿಸಿದ ಜಾಗವನ್ನು ಅದೇ ಉದ್ದೇಶಕ್ಕಾಗಿ ಕಾಯ್ದಿರಿಸುವಂತೆ ಹಾಗೂ ಕೈಬಿಟ್ಟು ಹೋಗಿರುವ ಚಿಕ್ಕಮಗಳೂರು ಗ್ರಾಮದ ಸರ್ವೇ ನಂ.285 ರಲ್ಲಿ 10.34 ಎಕರೆ ಹಾಗೂ ಸರ್ವೇ ನಂ.200 ರಲ್ಲಿ 19.20 ಎಕರೆ ಸೇರಿದಂತೆ ಒಟ್ಟು 30.14 ಎಕರೆ ಜಾಗವನ್ನು ವಿಮಾನ ನಿಲ್ದಾಣ ಅಭಿವೃದ್ಧಿಗೆ ಹಸ್ತಾಂತರಿಸಲಾಗಿದೆ ಹಾಗೂ ತಾತ್ಕಾಲಿಕ ಅತಿಕ್ರಮಣ ತೆರವುಗೊಳಿಸುವಂತೆ ಕೆಎಸ್‍ಐಐಡಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿರುವಂತೆ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ನಗರದ ಪೌರಾಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News